ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನ್ರೆಗಾ ಯೋಜನೆಯನ್ನು ವಿಬಿ- ಜಿ ರಾಮ್ ಜಿ ಎಂದು ಬದಲಾವಣೆ ಮಾಡಿರುವುದು ಕೇವಲ ಹೆಸರಿನ ಬದಲಾವಣೆಯಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನ ಪಕ್ಷದ ರಾಜ್ಯ ಕಛೇರಿ ಜೆಪಿ ಭವನದಲ್ಲಿ ಕೇಂದ್ರ ಸರ್ಕಾರದ ವಿಬಿ-ಜಿ ರಾಮ್ ಜಿ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ವಿಬಿ- ಜಿ ರಾಮ್ ಜಿ ಹೆಸರು ಬದಲಾವಣೆ ಎಂದರೆ ಭ್ರಷ್ಟಾಚಾರ ಮುಕ್ತ, ಜನಪರ ಬದಲಾವಣೆಯಾಗಿದೆ. ಕೂಲಿ ಕಾರ್ಮಿಕರ ಆರ್ಥಿಕ ಹಿತದೃಷ್ಟಿಯಿಂದ ಬದಲಾವಣೆ ಮಾಡಲಾಗಿದ್ದು, ಮಧ್ಯವರ್ತಿಗಳು, ಗುತ್ತಿಗೆದಾರ ಹಾವಳಿ ತಪ್ಪಿಸಿ ಕೂಲಿ ಕಾರ್ಮಿಕರಿಗೆ ನೇರವಾಗಿ ಪ್ರಯೋಜನ ದೊರೆಯಲು ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಬದಲಾವಣೆ ತಂದಿದೆ ಎಂದು ನಿಖಿಲ್ ತಿಳಿಸಿದ್ದಾರೆ.
ಗ್ರಾಮಗಳ ಅಭಿವೃದ್ಧಿ ಹಾಗೂ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಇಟ್ಟಿರುವ ಈ ದಿಟ್ಟ ಹೆಜ್ಜೆಯನ್ನು ನಮ್ಮ ಜೆಡಿಎಸ್ ಪಕ್ಷ ಸ್ವಾಗತಿಸುತ್ತದೆ ಮತ್ತು ಎನ್ಡಿಎ ಮಿತ್ರಪಕ್ಷವಾಗಿ ಈ ಯೋಜನೆಯನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವಿಬಿ- ಜಿ ರಾಮ್ ಜಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಆಡಳಿತದ ಹುಳುಕುಗಳು ಹಾಗೂ ತಮ್ಮ ಆಡಳಿತದಲ್ಲಿ ಮಹಾತ್ಮ ಗಾಂಧಿಜೀ ಅವರ ಬಗ್ಗೆ ಕಾಂಗ್ರೆಸ್ ತೋರಿದ ಧೋರಣೆಯನ್ನು ಖಂಡಿಸಿ, ಕಾಂಗ್ರೆಸ್ ಪಕ್ಷಕ್ಕೆ ಹಲವು ಪ್ರಶ್ನೆಗಳನ್ನು ಮಾಧ್ಯಮದ ಮೂಲಕ ಕೇಳಿದೆನು.ಜೊತೆಗೆ ಮನ್ರೆಗಾ ಹಾಗೂ ವಿಬಿ- ಜಿ ರಾಮ್ ಜಿ ಯೋಜನೆಯ ವ್ಯತ್ಯಾಸ ಹಾಗೂ ಬದಲಾವಣೆಗಳ ಕುರಿತು ಮಾಧ್ಯಮ ಮಿತ್ರರ ಮೂಲಕ ರಾಜ್ಯದ ಜನತೆಗೆ ನಿಖಿಲ್ ತಿಳಿಸಿದರು.
ಅತೀ ಶೀಘ್ರವಾಗಿ ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪೋಸ್ಟರ್ ಅಭಿಯಾನ ಮಾಡಲಿದ್ದು, ಮುಂಬರುವ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ನಿಖಿಲ್ ಹೇಳಿದರು.
ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಹಿರಿಯರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ, ಶಾಸಕಿ ಕರೆಯಮ್ಮ ಜೆ ನಾಯ್ಕ್, ಬೆಂಗಳೂರು ನಗರ ಅಧ್ಯಕ್ಷ ರಮೇಶ್ ಗೌಡ, ಮುಖಂಡರಾದ ಜಗದೀಶ್, ಕೃಷ್ಣ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

