ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆ ಗೇರಿದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿಯ ಪ್ರಥಮ ಅಧ್ಯಕ್ಷರಾಗಿ ಪ್ರೇಮ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಶ್ವೇತಾ ಮುರುಳಿದರ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮ್ ಕುಮಾರ್ ಹಾಗೂ ಶ್ವೇತಾ ಮುರುಳಿದರ್ ಮಾತ್ರ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಪ್ರೇಮ್ ಕುಮಾರ್ ಅಧ್ಯಕ್ಷರೆಂದು ಶ್ವೇತಾ ಮುರುಳಿಧರ್ ಅವರನ್ನು ಉಪಾಧ್ಯಕ್ಷರೆಂದು ಘೋಷಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಪ್ರೇಮ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಕೂಡಾ ಅದರ ಹೊರತಾಗಿ ಸಾಕಷ್ಟು ಸಮಸ್ಯೆಗಳ ಸವಾಲುಗಳು ನಮ್ಮ ಮುಂದಿದೆ. ರಸ್ತೆ ಒಳಚರಂಡಿ, ಬೀದಿ ದೀಪ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಅಹರ್ನಿಷಿ ಶ್ರಮಿಸಿ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜು ರವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಪ್ರಪ್ರಥಮ ಪಟ್ಟಣ ಪಂಚಾಯ್ತಿಯಾದ ಭಾಷೆಟ್ಟಿ ಹಳ್ಳಿಯನ್ನು ಮಾದರಿ ಪಟ್ಟಣ ಪಂಚಾಯ್ತಿಯನ್ನಾಗಿ ಮಾಡುವ ಗುರಿ ನನ್ನದು.
ಇದಕ್ಕಾಗಿ ಪಕ್ಷತೀತವಾಗಿ ಎಲ್ಲಾ ಸದಸ್ಯರ ಜೊತೆಗೆ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಹಿರಿಯರ ಸಲಹೆ ಸೂಚನೆ ಮೇರೆಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲು ಸಿದ್ದನಿದ್ದೇನೆ.
ನನ್ನನ್ನು ಪಟ್ಟಣ ಪಂಚಾಯ್ತಿ ಪ್ರಥಮ ಅಧ್ಯಕ್ಷ ನಾಗಲು ಶ್ರಮಿಸಿದ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜು ಹಾಗೂ ತಾಲೂಕಿನ ಸಮಸ್ತ ಬಿಜೆಪಿ ಮುಖಂಡರಿಗೂ ಮುಖ್ಯವಾಗಿ ನನ್ನ ವಾರ್ಡಿನ ಎಲ್ಲಾ ಮತದಾರ ಬಂದುಗಳಿಗೂ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದ ಪ್ರೆಮಕುಮಾರ್ ಹಾಗೂ ಉಪಾಧ್ಯಕ್ಷೆ ಶ್ವೇತಾ ಮುರುಳಿದರ್ ರವರನ್ನು ಶಾಸಕ ಧೀರಜ್ ಮುನಿರಾಜು, ಬಿಜೆಪಿ ಹಿರಿಯ ಮುಖಂಡ ಬಿ. ಸಿ. ನಾರಾಯಣಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಬಿ. ಮುದ್ದಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಕೆ. ನಾಗೇಶ್ ಸೇರಿದಂತೆ ತಾಲೂಕಿನ ಹಲವಾರು ಮುಖಂಡರು ಅಭಿನಂದಿಸಿದ್ದಾರೆ.

