ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ಕಾರ್ಮಿಕ ನಾಯಕ ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಹಾಗೂ ಜನಪ್ರಿಯ ಕಾರ್ಮಿಕ ಮುಖಂಡರಾದ ಎಚ್.ವಿ. ಅನಂತ ಸುಬ್ಬರಾವ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು.
ಸುದೀರ್ಘ ನಾಲ್ಕು ದಶಕಗಳ ಕಾಲ ಕಾರ್ಮಿಕ ಮುಖಂಡರಾಗಿ ಅನೇಕ ಚಳವಳಿಗಳನ್ನು ಮುನ್ನಡೆಸಿದ್ದ ಹೋರಾಟಗಾರ ಅನಂತ ಸುಬ್ಬರಾವ್ ನನಗೂ ಆತ್ಮೀಯರಾಗಿದ್ದರು. ಅವರ ದಣಿವರಿಯದ ಹೋರಾಟದ ಛಲ ಮತ್ತು ಸೈದ್ಧಾಂತಿಕಬದ್ಧತೆ ಹೋರಾಟಗಾರರಿಗೆ ಒಂದು ಮಾದರಿ ಎಂದು ಸಿಎಂ ತಿಳಿಸಿದರು.
ಅವರ ನಿರ್ಗಮನದಿಂದ ಸಮಾಜಕ್ಕೆ ಮುಖ್ಯವಾಗಿ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಾರ್ಥಿಸಿದರು.
ಕಾರ್ಮಿಕಸಚಿವರಾದ ಸಂತೋಷ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಪ್ರಿಯಕೃಷ್ಣ ಸೇರಿ ಹಲವರು ಜೊತೆಗಿದ್ದರು.

