ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಿಗರೇಟು ಸೇದಲು ಬೆಂಕಿಪೊಟ್ಟಣ ನೀಡುವಂತೆ ಸ್ನೇಹಿತರು ಬೇಡಿಕೆ ಇಟ್ಟಿದ್ದು ಬೆಂಕಿಪೊಟ್ಟಣ ಇಲ್ಲ ಎಂದಿದ್ದಕ್ಕೆ ಯುವಕನ ಪ್ರಾಣ ತೆಗೆದು ಪರಾರಿಯಾಗಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಆರೋಪಿಗಳಾದ ಸುಮಂತ್ ಜಮೀನ್ದಾರ್(23) ಕೊಲೆಯಾದ ಯುವಕ. ಉಜ್ವಲ್ ಪ್ರಸಾದ್ ಬಿ.ಎಸ್ (29), ಪ್ರಿನ್ಸ್ (24), ಸೂರಜ್ ರಾಮ್(23) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಬಾಲಕ ಸಹ ಭಾಗಿಯಾಗಿದ್ದಾನೆ.
ಏನಿದು ಪ್ರಕರಣ:
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಶವದ ಗುರುತು ಪತ್ತೆ ಮಾಡಿದಾಗ ಮೃತ ಯುವಕ ಒಡಿಶಾದ ಸುಮಂತ್ ಜಮೀನ್ದಾರ್ (23) ಎಂದು ಗುರುತಿಸಲಾಗಿದೆ.
ಮೃತನ ಸಂಬಂಧಿ ಜಯದೇವ ಎಂಬವರು, ಡಿ.31ರಂದು ಸುಮಂತ್ ತನ್ನ ಸ್ನೇಹಿತ ನಿಖಿಲ್ ಜತೆ ಹೊಸ ವರ್ಷದ ಪಾರ್ಟಿ ಮಾಡಲೆಂದು ಹೇಳಿ ಹೋಗಿದ್ದ. ಆದರೆ ಬೆಳಗ್ಗೆ ಶವವಾಗಿ ಸಿಕ್ಕಿದ್ದಾನೆ. ನಿಖಿಲ್ ರೂಮ್ನಲ್ಲಿಯೂ ರಕ್ತದ ಕಲೆಗಳು ಪತ್ತೆಯಾಗಿವೆ. ರಾತ್ರಿಯಿಂದ ನಿಖಿಲ್ ನಾಪತ್ತೆಯಾಗಿದ್ದಾನೆ. ನಿಖಿಲ್ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಿಖಿಲ್ಗಾಗಿ ಶೋಧ ಕೈಗೊಂಡ ಪೊಲೀಸರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ರೈಲಿನಲ್ಲಿ ಒಡಿಶಾಗೆ ಹೋಗುತ್ತಿದ್ದಾಗ ಬೆನ್ನತ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕೊಲೆಗಾರ ನಿಖಿಲ್ ಅಲ್ಲ ಎಂಬುದು ಗೊತ್ತಾಗಿದೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಲು ನಿಖಿಲ್ ಯೋಜನೆ ರೂಪಿಸಿದ್ದ. ಡಿ.31 ರಾತ್ರಿ ತನ್ನ ಭಾವನ ರೂಮಿನಲ್ಲಿದ್ದ ಸ್ನೇಹಿತ ಸುಮಂತ್ನಿಗೆ ಫೋನ್ ಮಾಡಿ, ‘ನಾಳೆ ಹೊಸ ವರ್ಷ. ಇವತ್ತು ರೂಮಿನಲ್ಲಿ ರಾತ್ರಿಯೆಲ್ಲ ಎಣ್ಣೆ ಪಾರ್ಟಿ ಮಾಡೋಣ ಬಾ‘ ಎಂದು ಕರೆಸಿ ಮದ್ಯ ಸೇವಿಸಿದ್ದಾರೆ. ಹೊಸ ವರ್ಷಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದಾಗ ಕುಡಿದ ಮತ್ತಿನಲ್ಲಿ ನಿಖಿಲ್ ಮತ್ತು ಸುಮಂತ್ ರೂಮಿನಿಂದ ಹೊರಬಂದಿದ್ದಾರೆ. ಇಬ್ಬರು ಮಾತನಾಡುತ್ತಾ ಪರಸ್ಪರ ಕಾಲಕಳೆಯುತ್ತಿದ್ದರು.
ಈ ವೇಳೆ ಇವರ ಬಳಿ ಮದ್ಯಪಾನರಾಗಿದ್ದ ಸ್ಥಳೀಯ ನಾಲ್ವರು ಯುವಕರು ಬಂದು ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೇಳಿದ್ದಾರೆ. ಆಗ ನಮ್ಮ ಬಳಿ ಇಲ್ಲ ಎನ್ನುತ್ತಾರೆ.
ಹೀಗೆ ಬೆಂಕಿಪೊಟ್ಟಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಗಳ ಶುರುವಾಗಿದೆ.ಕೈ ಕೈ ಮಿಲಾಸುವಾಗ ಸುಮಂತ್ ಬಲಗೈಗೆ ಎ1 ಆರೋಪಿ ಉಜ್ವಲ್ ಪ್ರಸಾದ್ ಬಿ.ಎಸ್ (29) ಚಾಕುವಿನಿಂದ ಚುಚ್ಚುತ್ತಾನೆ. ಎ2 ಆರೋಪಿಪ್ರಿನ್ಸ್ (24) ಕಲ್ಲಿನಿಂದ ತಲೆಯ ಬಲಭಾಗಕ್ಕೆ ಹೊಡೆಯುತ್ತಾನೆ. ಎ3 ಸೂರಜ್ ರಾಮ್( 23) ಹಾಗೂ ಜೆ1 (ಅಪ್ರಾಪ್ತ) ಮೂಗು ಕಣ್ಣಿಗೆ ಹೊಡೆಯುತ್ತಾರೆ.
ಹೀಗೆ ನಾಲ್ವರು ಸೇರಿಕೊಂಡು ಸುಮಂತ್ಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಸುಮಂತ್ಗೆ ಹಲ್ಲೆ ಮಾಡುವಾಗ ನಿಖಿಲ್ ಬಿಡಿಸಲು ಯತ್ನಿಸುತ್ತಾನೆ. ನಿಖಿಲ್ಗೂ ಏಟು ಬೀಳುತ್ತವೆ. ಇವರ ಹಲ್ಲೆ ತಾಳಲಾರದೇ ಪ್ರಾಣ ಉಳಿಸಿಕೊಳ್ಳಲು ಸುಮಂತ್ ಮಹಡಿ ಮೇಲೆ ಓಡಿಹೋಗಿ ನೀರಿನ ಟ್ಯಾಂಕ್ ಬಳಿ ಅಡಗಿಕೊಳ್ಳುತ್ತಾನೆ. ಆದರೂ ಸುಮಂತ್ನನ್ನು ಬೆಂಬಿಡದ ಕಿರಾತಕರು ಮಹಡಿಮೇಲೆ ಬಂದು ಸುಮಂತ್ನನ್ನು ಹಿಡಿದು ಮೇಲಿಂದ ಕೆಳಕ್ಕೆ ತಳ್ಳುತ್ತಾರೆ. ಸುಮಂತ್ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ ಎಂದು ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ತಿಳಿಸಿದ್ದಾರೆ.
ಸುಮಂತ್ ಸತ್ತಿರುವುದನ್ನು ಖಚಿತಪಡಿಸಿಕೊಂಡ ನಾಲ್ವರು ಆರೋಪಿಗಳು ಮರುದಿನ ದಾಬಸ್ ಪೇಟೆಯಲ್ಲಿ ತಲೆಮರೆಸಿಕೊಳ್ಳುತ್ತಾರೆ. ಘಟನೆಯಿಂದ ಭಯಭೀತನಾದ ನಿಖಿಲ್ ರಾತ್ರಿ ಅಲ್ಲೇ ಮಲಗಿ ಬೆಳಗ್ಗೆ ತನ್ನ ಮತ್ತೊಬ್ಬ ಫ್ರೆಂಡ್ ನೈಟ್ ಶಿಫ್ಟ್ ಮುಗಿಸಿಕೊಂಡು ಬರುವವರೆಗೆ ಇದ್ದು, ರಾತ್ರಿ ಗಲಾಟೆ ಆಗಿದೆ, ನನಗೆ ಗಾಯವಾಗಿದೆ. ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಒಡಿಶಾಗೆ ರೈಲು ಹತ್ತುತ್ತಾನೆ ಎಂದೂ ಇನ್ಸ್ಪೆಕ್ಟರ್ ಹೇಳಿದ್ದಾರೆ.
ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಸುನೀಲ್ ಭಾಸಗಿ, ಸಚಿನ್, ಪ್ರವೀಣ್, ಫೈರೋಜ್, ನಾರಾಯಣಸ್ವಾಮಿ, ಗಣಪತಿ ಪೊಲೀಸ್ ಸಿಬ್ಬಂದಿ ಕೊಲೆಯ ಬಗ್ಗೆ ಮಾಹಿತಿ ಕಲೆ ಹಾಕಿ ನಿಜವಾಗಿ ಸುಮಂತ್ನನ್ನು ಕೊಲೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

