ಚಂದ್ರವಳ್ಳಿ ನ್ಯೂಸ್, ಬೆಂಗಳೂರು/ನವದೆಹಲಿ:
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿದ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಗಟ್ಟಲು ಯುಜಿಸಿ ನಿಯಮಗಳು ಅಸ್ಪಷ್ಟ ಮತ್ತು ದುರುಪಯೋಗಕ್ಕೆ ಕಾರಣವಾಗಲಿವೆ.
ಈ ವಿಷಯದಲ್ಲಿ ಮಧ್ಯಪ್ರವೇಶಿಸದಿದ್ದರೆ, ಅಪಾಯಕಾರಿ ಪರಿಣಾಮ ಎದುರಿಸಬೇಕಾಗುತ್ತದೆ. ಈ ನಿಯಮಗಳು ಸಮಾಜವನ್ನು ವಿಭಜಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ ಅಭಿಪ್ರಾಯಪಟ್ಟಿದೆ.
ಯುಜಿಸಿಯ ಹೊಸ ನಿಯಮಗಳು ಸ್ಪಷ್ಟವಾದ ಸುರಕ್ಷತಾ ವಿಧಾನಗಳನ್ನು ಹೊಂದಿಲ್ಲ. ಅವುಗಳನ್ನು ಸುಲಭವಾಗಿ ಇನ್ನೊಬ್ಬರ ವಿರುದ್ಧ ದುರುಪಯೋಗ ಮಾಡಿಕೊಳ್ಳಬಹುದು.
ವಿಶೇಷವಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ವಿರುದ್ಧ ಇವುಗಳನ್ನು ಬಳಕೆ ಮಾಡಬಹುದು ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಿತು.
ತಜ್ಞರ ಸಮಿತಿ ರಚಿಸಿ:
ಸುಪ್ರೀಂ ಕೋರ್ಟ್ ಹೊಸ ನಿಯಮಗಳಿಗೆ ತಡೆ ನೀಡಿದ್ದಲ್ಲದೇ, ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ನೋಟಿಸ್ ಜಾರಿ ಮಾಡಿತು. ಈ ಕುರಿತು ಮಾರ್ಚ್ 19ರೊಳಗೆ ಪ್ರತಿಕ್ರಿಯಿಸಬೇಕು. ಅಲ್ಲದೇ, ಈ ನಿಯಮಗಳನ್ನು ಖ್ಯಾತ ಕಾನೂನು ತಜ್ಞರ ಪರಿಶೀಲನೆಗೆ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಜಾರಿಗೆ ತಂದಿರುವ ಹೊಸ ನಿಯಮಗಳು ಪರಾಮರ್ಶೆಗೆ ಒಳಪಡಬೇಕಿದೆ. ಅಲ್ಲಿಯವರೆಗೂ, 2012ರಲ್ಲಿ ಜಾರಿ ಮಾಡಲಾದ ನಿಯಮಗಳು ವಿವಿಗಳಲ್ಲಿ ಜಾರಿಯಲ್ಲಿರಲಿವೆ. ನಿಯಂತ್ರಿತ ಭಾಷೆ ನಿಯಮವು ವಿವಾದಿತವಾಗಿದೆ. ಈ ಬಗ್ಗೆ ಯಾವುದೇ ವಿವರಣೆ ಇಲ್ಲ ಎಂದು ಕೋರ್ಟ್ ಹೇಳಿತು.
ಆಕ್ಷೇಪದ ಅಂಶಗಳು:
ಯುಜಿಸಿಯು ಹೊಸ ನಿಯಮಗಳನ್ನು ರೂಪಿಸಿ ಅವುಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ ಮಾಡಬೇಕು ಎಂದು ಜನವರಿ 13 ರಂದು ಆದೇಶ ಹೊರಡಿಸಿತ್ತು. ಎಲ್ಲ ವಿವಿಗಳಲ್ಲಿ ಸಮಾನತೆ ಸಮಿತಿಗಳನ್ನು ರಚಿಸಬೇಕು.
ಈ ಸಮಿತಿಗಳು ಇತರ ಹಿಂದುಳಿದ ವರ್ಗಗಳ (ಒಬಿಸಿ), ಪರಿಶಿಷ್ಟ ಜಾತಿಗಳು (ಎಸ್ಸಿ), ಪರಿಶಿಷ್ಟ ಪಂಗಡಗಳು (ಎಸ್ಟಿ), ಅಂಗವೈಕಲ್ಯ ವ್ಯಕ್ತಿಗಳು ಮತ್ತು ಮಹಿಳೆಯರನ್ನು ಒಳಗೊಂಡಿರಬೇಕು ಎಂಬ ನಿಯಮವಿದೆ.
ಸಮಾನತೆ ಅಂಶದ ಮೇಲೆ ರೂಪಿಸಲಾದ ನಿಯಮಗಳಲ್ಲಿ ಸವರ್ಣೀಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯಲು ಅವಕಾಶ ನೀಡುವ ಅಂಶಗಳಿವೆ. ಇದು ಅಪಾಯಕಾರಿ ಎಂದು ಆರೋಪಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳ ವಿರುದ್ಧವೂ ಹೋರಾಟ ನಡೆಸಲಾಗುತ್ತಿದೆ.
ಯುಜಿಸಿಯ ಹೊಸ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ, ಮೃತ್ಯುಂಜಯ್ ತಿವಾರಿ, ವಕೀಲ ವಿನೀತ್ ಜಿಂದಾಲ್ ಮತ್ತು ರಾಹುಲ್ ದಿವಾನ್ ಎಂಬವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

