ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೇಂದ್ರ ಸರ್ಕಾರ ಶೇ.೧೦ ಮೀಸಲಾತಿ ಕೇವಲ ೪೮ ಗಂಟೆಗಳಲ್ಲಿ ಅನುಷ್ಠಾನಕ್ಕೆ ತಂದಿದ್ದು, ಮೂವತ್ತು ವರ್ಷ ಹೋರಾಟ ನಡೆಸಿದ ಎಸ್ಸಿ-ಎಸ್ಟಿ ಜನರ ಬದುಕಿನ ಉನ್ನತಿಗಾಗಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ತನ್ನ ಬದ್ಧತೆ ಪ್ರದರ್ಶಿಸಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಪ್ರಮಾಣ ಶೇ.೫೬ಕ್ಕೆ ಹೆಚ್ಚಳ ಮಾಡಿದ್ದು, ಈ ಸಂಬಂಧ ಕೆಲವರು ತಕಾರರು ಅರ್ಜಿ ಸಲ್ಲಿಸಿದ್ದು ಕೋರ್ಟ್ ತೀರ್ಪು ಹೊರಬೀಳಬೇಕಾಗಿದೆ ಎಂದರು.
ಒಂದು ವೇಳೆ ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಹೊರಬಿದ್ದರೇ ಎಸ್ಸಿ-೨, ಎಸ್‌ಟಿ-೪ರಷ್ಟು ಮೀಸಲಾತಿ ಪ್ರಮಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬಿಜೆಪಿ ಮುಖಂಡರು, ಸಂಸದರು, ಶಾಸಕರು ಎಲ್ಲರೂ ಸೇರಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಸತ್ ಅಂಗೀಕಾರ ಮುದ್ರೆ ನೀಡಿ, ಕಾಯ್ದೆ ಮಾಡುವಂತೆ ಒತ್ತಡ ತರಬೇಕಿದೆ. ಇಡಬ್ಲ್ಯುಎಸ್ ರೀತಿ ಅನುಷ್ಠಾನಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಭಾಜಪ ರಾಜ್ಯ ನಾಯಕರು ಬದ್ಧತೆ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಇಂದಿರಾ ಸಹನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣ ಶೇ.೫೦ ಮೀರದಂತೆ ತೀರ್ಪು ನೀಡಿದೆ. ಜೊತೆಗೆ ರಾಜ್ಯಗಳಲ್ಲಿನ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರೆ ಹೆಚ್ಚಳ ಮಾಡುವುದು ಅನಿವಾರ್ಯ ಇದ್ದಲ್ಲಿ ಮಾಡಬಹುದೆಂದು ತಿಳಿಸಿದೆ. ಈಗಾಗಲೇ ಬಹಳಷ್ಟು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.೫೦ಕ್ಕಿಂತ ಹೆಚ್ಚಿದ್ದು, ಎಲ್ಲರೂ ಸುಪ್ರೀಂ ಕೋರ್ಟ್ ಮೆಟ್ಟೀಲು ಏರಿದ್ದಾರೆ ಎಂದರು.
ಸ್ವತಂತ್ರ ಪೂರ್ವದಲ್ಲಿ ನಿಗದಿ ಆಗಿದ್ದ ಮೀಸಲಾತಿ ಪ್ರಮಾಣ ಈಗಲೂ ಚಾಲ್ತಿಯಲ್ಲಿದೆ. ಈಗ ಜನಸಂಖ್ಯೆ ದುಪ್ಪಟ್ಟು ಆಗಿದೆ. ಜೊತೆಗೆ ಎಸ್ಸಿ ಪಟ್ಟಿಗೆ ಅನೇಕ ಜಾತಿಗಳು ಸೇರ್ಪಡೆಗೊಂಡಿವೆ. ಅನಿವಾರ್ಯವಾಗಿ ಮೀಸಲಾತಿ ಹೆಚ್ಚಳ ಮಾಡಲೇಬೇಕಾಗಿದೆ. ಈ ವಿಷಯವನ್ನು ಕೋರ್ಟ್‌ಗೆ ರಾಜ್ಯ ಸರ್ಕಾರ ಮನದಟ್ಟು ಮಾಡಿಕೊಡಬೇಕೆಂದು ತಿಳಿಸಿದರು.
ಒಳಮೀಸಲಾತಿ ವಿಷಯದಲ್ಲಿ ಯಾವುದೇ ರೀತಿ ಗೊಂದಲ ಇಲ್ಲ. ರಾಜ್ಯದಲ್ಲಿ ಈಗಾಗಲೇ ಅನುಷ್ಠಾನದಲ್ಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅದರ ಫಲವನ್ನು ಎಸ್ಸಿಯಲ್ಲಿರುವ ಎಲ್ಲ ವರ್ಗದವರು ಪಡೆದಿದ್ದಾರೆ. ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಸಲು ಕೋರ್ಟ್ ಕೂಡ ಅನುಮತಿ ನೀಡಿದೆ ಎಂದರು.
ಎರಡುವರೆ ವರ್ಷದಿಂದಲೂ ಒಳಮೀಸಲಾತಿ ಕಾರಣಕ್ಕೆ ಉದ್ಯೋಗ ನೇಮಕಾತಿ ಪ್ರಕ್ರಿಯೇ ಸ್ಥಗಿತಗೊಂಡಿದ್ದು, ಎಲ್ಲ ವರ್ಗದ ವಿದ್ಯಾವಂತ ನಿರುದ್ಯೋಗಿಗಳು ಹಣ ಕೊಟ್ಟು ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುತ್ತಿದ್ದಾರೆ. ಅವರೆಲ್ಲರಿಗೂ ನ್ಯಾಯ ದೊರಕಿಸಿಕೊಡಲು ಸರ್ಕಾರ ತಕ್ಷಣವೇ ಎಲ್ಲ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕೋರ್ಟ್ ತೀರ್ಪು ಬರುವವರೆಗೂ ಕಾಯಬಾರದು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಂಡಿದ್ದು, ಅದಕ್ಕೆ ಕಾನೂನು ರೂಪ ನೀಡಲು ವಿಧಾನಸಭೆಯ ಕೆಳ-ಮೇಲ್ಮನೆಯಲ್ಲಿ ಸರ್ವ ಸಮ್ಮತ ಒಪ್ಪಿಗೆ ಪಡೆದು ಕಳುಹಿಸಿಕೊಟ್ಟಿದ್ದ ವರದಿಯನ್ನು ರಾಜ್ಯಪಾಲರು ಕೆಲ ಅಂಶಗಳ ಸ್ಪಷ್ಟನೆ ಕೇಳಿ ವಾಪಸ್ಸು ಕಳುಹಿಸಿದ್ದಾರೆ. ಈ ವಿಷಯದಿಂದ ಮಾದಿಗ ಸಮುದಾಯದಲ್ಲಿನ ಕೆಲವರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯಪಾಲರು ಒಪ್ಪಲಿ-ಒಪ್ಪದಿರಲಿ ಒಳಮೀಸಲಾತಿ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೇವಲ ಕಾನೂನು ರೂಪ ನೀಡಲು ಮಾತ್ರ ಸಮಸ್ಯೆ ಆಗಲಿದೆ. ಆದ್ದರಿಂದ ಭೀತಿ ಬೇಕಿಲ್ಲ ಎಂದರು.
ಪ್ರಜಾಸತ್ತಾತ್ಮಕ, ಸಂವಿಧಾನದ ಆಶಯದ ಪ್ರಕಾರ ವಿಧಾನಸಭೆ ಮತ್ತು ಪರಿಷತ್ ಸರ್ವಸಮ್ಮತವಾಗಿ ಅಂಗೀಕರಿಸಿದ ಬಿಲ್‌ನ್ನು ರಾಜ್ಯಪಾಲರು ಅನುಮೋದಿಸುವುದು ಅನಿವಾರ್ಯ. ಈ ವಿಷಯವನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಿದೆ. ದಲಿತ ಸಮುದಾಯದ ಪರವಾಗಿ ನಾವು ಕೂಡ ವರದಿಗೆ ಒಪ್ಪಿಗೆ ನೀಡುವಂತೆ ಕೋರುತ್ತೇವೆ ಎಂದು ತಿಳಿಸಿದರು.
ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವುದು ಅನಿವಾರ್ಯ. ಇದಕ್ಕೆ ವ್ಯತಿರಿಕ್ತವಾಗಿ ಕೋರ್ಟ್ ತೀರ್ಪು ಬಂದರೇ ಸಮಸ್ಯೆ ಆಗಲಿದೆ. ಆದ್ದರಿಂದಲೇ ಎಸ್ಸಿ-ಎಸ್ಟಿ ಸಮುದಾಯದ ಮುಖಂಡರು, ಚಿಂತಕರು, ರಾಜಕಾರಣಿಗಳೆಲ್ಲರೂ ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆ ಸೇರಿ ಬೃಹತ್ ಹಕ್ಕೋತ್ತಾಯ ಮಂಡಿಸುವ ಚಿಂತನೆ ಇದೆ ಎಂದರು.
ಅಲೆಮಾರಿಗಳಿಗೆ ಶೇ.೧ ಮೀಸಲಾತಿ ಜೊತೆಗೆ ಎ ಗುಂಪು ನೀಡುವಂತೆ ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ನೀಡಿತ್ತು. ಆದರೆ, ದಲಿತರಲ್ಲಿನ ಕೆಲ ಜಾತಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಅವರನ್ನು ಸಿ ಗುಂಪಿಗೆ ಸೇರಿಸಿದೆ. ಇದರ ವಿರುದ್ಧ ಅವರು ಕೋರ್ಟ್ ಮೆಟ್ಟಿಲು ಏರಿದ್ದು, ಅದು ಒಳಮೀಸಲಾತಿಗೆ ತಾತ್ಕಾಲಿಕ ಅಡ್ಡಿಯಾಗಿದೆ. ಈಗಾಗಲೇ ಮುಖ್ಯಮಂತ್ರಿ ಹಾಗೂ ದಲಿತ ಮುಖಂಡರು ಅಲೆಮಾರಿ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.
ಆರ್ಥಿಕ ಸೇರಿ ವಿವಿಧ ರೀತಿ ಸೌಲಭ್ಯ ನೀಡುವ ಮೂಲಕ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ಸರ್ಕಾರ ಭರವಸೆ ನೀಡಿದ್ದು, ಜೊತೆಗೆ ಎಸ್ಸಿ ಆಯೋಗ ಆಗುವದರಿಂದ ಕಾಲಕಾಲಕ್ಕೆ ಮೀಸಲಾತಿ ಪ್ರಮಾಣ ಬದಲಾವಣೆಗೆ ಅವಕಾಶ ದೊರೆಯಲಿದೆ. ಈ ವಿಷಯವನ್ನು ಮನದಟ್ಟು ಮಾಡಿಕೊಡಲಾಗಿದೆ. ಅದನ್ನು ಒಪ್ಪಿಕೊಂಡಿದ್ದಾರೆ.
ಅವರು ಕೋರ್ಟ್‌ಗೆ ಸಲ್ಲಿಸಿರು ಆಕ್ಷೇಪಣೆ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದ್ದು, ಎಂಟತ್ತು ದಿನಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುವ ವಿಶ್ವಾಸ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ರವಿವರ್ಮ, ವಕೀಲ ರವಿಚಂದ್ರ, ಅನಿಲ್ ಕೋಟಿ ಇದ್ದರು.

