ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ಸರ್ಕಾರ ಕರ್ನಾಟಕವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿಕೊಂಡಿದೆ. ನಗರಾಭಿವೃದ್ಧಿ, ವಸತಿ, ಅಬಕಾರಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಬಿಡುಗಡೆಯಾಗದ 37,370 ಕೋಟಿ ರೂ. ಗುತ್ತಿಗೆದಾರರ ಬಿಲ್ ಹಾಗೂ ಗುತ್ತಿಗೆದಾರರ ಭ್ರಷ್ಟಾಚಾರದ ಗಂಭೀರ ಆರೋಪಗಳು ಈ ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡವನ್ನು ಮತ್ತೆ ಬಯಲು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಹೈಕಮಾಂಡ್ ಗೆ ಕಪ್ಪ ಸಲ್ಲಿಸುವ ಭರದಲ್ಲಿ ರಾಜ್ಯದ ಗುತ್ತಿಗೆದಾರರನ್ನು ಬೀದಿಗೆ ತಳ್ಳಿರುವುದಕ್ಕೆ ನಿಮ್ಮ ಸಮಜಾಯಿಷಿಯಾದರೂ ಏನು? ಅವರಿಗೆ ನೀಡಲು ಹಣವಿಲ್ಲದೆ ಬೊಕ್ಕಸ ಖಾಲಿಯಾಗಿದೆಯೇ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
2025ರ ಏಪ್ರಿಲ್ ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಹೇಳಿ ಇಲ್ಲಿಯವರೆಗೂ ಮಾಡದೆ, ಈಗ ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಗಡುವು ನೀಡುವಷ್ಟರ ಮಟ್ಟಿಗೆ ಅವರನ್ನು ಆಕ್ರೋಶ, ಹತಾಶೆಗೆ ತಳ್ಳಿರುವುದೇ ನಿಮ್ಮ ಸಾಧನೆ! ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ, ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲದಂತಾಗಿದೆ.
ಕಮಿಷನ್ ಏಜೆಂಟ್‌ಗಳ ಕೈಗೆ ಅಧಿಕಾರ ನೀಡಿ ರಾಜ್ಯವನ್ನು ದಿವಾಳಿ ಮಾಡಬೇಡಿ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿ, ಗುತ್ತಿಗೆದಾರರನ್ನು ಉಳಿಸಿ! ಇಡೀ ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. ನಿಮ್ಮ ಲೂಟಿಯ ದುರಾಡಳಿತಕ್ಕೆ ಜನರೇ ಅಂತ್ಯ ಹಾಡಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

