ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಿನ ಪತ್ರಿಕೆಗಳಲ್ಲಿ ರಾಜ್ಯ ಸರ್ಕಾರ ಜಾಹೀರಾತಿನ ರೂಪದಲ್ಲಿ ಸುಳ್ಳುಗಳ ಸರಮಾಲೆಯನ್ನೇ ಹರಿಸಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಟೂನ್ ರೂಪದಲ್ಲಿ ಸುಳ್ಳು ಚಿತ್ರಿಸಿ, ಕಾಂಗ್ರೆಸ್ ಸರ್ಕಾರವೇ ‘ಜೋಕರ್‘ ಆಗಿದೆ. ಮೊದಲನೆಯದಾಗಿ, ‘ಸಂಘಪ್ಪ‘ ಎಂಬ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅವಮಾನಿಸಲು ಕರ್ನಾಟಕ ಕಾಂಗ್ರೆಸ್ ಪ್ರಯತ್ನಿಸಿದೆ ಎಂದು ಅವರು ಕಿಡಿಕಾರಿದ್ದಾರೆ.
ಉದ್ಯೋಗ ಖಾತ್ರಿಯನ್ನು ‘ಕೇಂದ್ರ ಸರ್ಕಾರ ನೀಡುವ ಭಿಕ್ಷೆ‘ ಎಂದು ಸರ್ಕಾರ ಹಸಿ ಸುಳ್ಳು ಹೇಳಿದೆ. ನೂತನ ವಿಕಸಿತ ಭಾರತ್ ಜಿ ರಾಮ್ ಜಿ ಯೋಜನೆ 100 ದಿನಗಳಿದ್ದ ಉದ್ಯೋಗ ಖಾತ್ರಿಯನ್ನು 125 ದಿನಗಳಿಗೆ ಹೆಚ್ಚಿಸಿರುವುದನ್ನು ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ಮುಚ್ಚಿಡಲು ಪ್ರಯತ್ನಿಸುತ್ತಿದೆ. ಸತ್ಯ ಹೊಸಿಲು ದಾಟುವ ಮುನ್ನ, ಸುಳ್ಳು ಊರೆಲ್ಲ ಸುತ್ತಾಡಿ ಬಂತು ಎನ್ನುವ ಮಾತಿಗೆ ಅನ್ವರ್ಥ ಎನ್ನುವಂತೆ ಕಾಂಗ್ರೆಸ್ ಸುಳ್ಳಾಡುತ್ತಿದೆ.
ನೂತನ ಕಾಯ್ದೆಯಡಿಯೂ ಎಲ್ಲ ಹಳ್ಳಿಗಳಲ್ಲೂ ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು, ಇದು ಗ್ರಾಮೀಣ ಆಸ್ತಿ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ. ಆದರೆ, ಇದರಲ್ಲಿ ‘ಇಲ್ಲ‘ ವಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರ ನಡೆಸುವ ಅವಕಾಶವಷ್ಟೇ. ಎಂದು ಸಿಟಿ ರವಿ ವಾಗ್ದಾಳಿ ಮಾಡಿದ್ದಾರೆ.
ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ನೀಡುತ್ತಿರುವುದು ‘ಅನುದಾನ‘ ಅಥವಾ ’ಭಿಕ್ಷೆ‘ಯಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60-40% ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕಿದೆ. ಇದು ಪಂಚಾಯತಿಗಳನ್ನು ದುರ್ಬಲಗೊಳಿಸುವುದಲ್ಲ. ಬದಲಿಗೆ ಗ್ರಾಮೀಣ ಬಲವರ್ಧನೆ.
ವಿಬಿ ಜಿ ರಾಮ್ ಜಿ ಯೋಜನೆಯ ಕುರಿತು ಕಾಂಗ್ರೆಸ್ ಪಕ್ಷ ಹಬ್ಬಿಸುತ್ತಿರುವ ಸುಳ್ಳುಗಳನ್ನು ನಾವು ಬಯಲು ಮಾಡಲೇಬೇಕಿದೆ ಎಂದು ರವಿ ಅವರು ತಿಳಿಸಿದರು.

