ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೊಲೆ ಆರೋಪಿ ನಟ ದರ್ಶನ್ ನೋಡುವ ಹಂಬಲವೇ ಪೊಲೀಸರಿಗೇ ಮುಳುವಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ದರ್ಶನ್ ನೋಡಲು ನಿಯಮ ಮೀರಿ ಹೋದ ಯಲಹಂಕ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಅವರಿಗೆ ಸಾಥ್ ನೀಡಿದ್ದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ನಿಯಮಬಾಹಿರವಾಗಿ ಭೇಟಿ ಮಾಡಲು ಪೊಲೀಸ್ ಪೇದೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಜೈಲು ವಾರ್ಡನ್ ನನ್ನು ವರ್ಗಾವಣೆ ಮಾಡಲಾಗಿದೆ.
ಜೈಲಿನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಜಿಪಿ ಅಲೋಕ್ ಕುಮಾರ್ ಅವರು ಪರಿಶೀಲಿಸಿದಾಗ ಕರ್ತವ್ಯಲೋಪ ಬೆಳಕಿಗೆ ಬಂದಿದ್ದು ಕೂಡಲೇ ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ ಪ್ರಭುಶಂಕರ ಚೌಹಾಣ್ ಎನ್ನುವರನ್ನು ಚಾಮರಾಜನಗರ ಕಾರಾಗೃಹಕ್ಕೆ ಎತ್ತಂಗಡಿ ಮಾಡಿ ಇಲಾಖೆ ತನಿಖೆಗೆ ಸೂಚನಾದೇಶ ಮಾಡಿದ್ದಾರೆ.
ಏನಿದು ಪ್ರಕರಣ?
ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಕಳೆದ ಜನವರಿ-24 ರಂದು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು.
ಪ್ರಕರಣವೊಂದರ ಆರೋಪಿಯನ್ನು ಜೈಲಿಗೆ ಬಿಡಲು ಯಲಹಂಕ ಕಾನ್ಸ್‌ಟೇಬಲ್ ಗಣೇಶ್ ಎಂಬುವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದು, ಈ ವೇಳೆ ಈ ವೇಳೆ ನಟ ದರ್ಶನ್ ನನ್ನು ತೋರಿಸುವಂತೆ ಮನವಿ ಮಾಡಿದ್ದಾರೆ.
ಬಳಿಕ ವಾರ್ಡನ್ ಪ್ರಭುಶಂಕರ ಚೌಹಾಣ್, ಸಿಸಿ ಕ್ಯಾಮರಾ ಕಣ್ತಪ್ಪಿಸಿ ಪೇದೆಯನ್ನು ದರ್ಶನ್ ಇರುವ ಬ್ಯಾರಕ್ಗೆ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವಿಚಾರ ತಿಳಿದ ಡಿಜಿಪಿ ಅಲೋಕ್ ಕುಮಾರ್, ವಾರ್ಡನ್ ಪ್ರಭುಶಂಕರ ಚೌಹಾಣ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಾಮರಾಜನಗರ ಕಾರಾಗೃಹಕ್ಕೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೇ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಇನ್ನು ದರ್ಶನ್ ನೋಡಲು ಹೋಗಿದ್ದ ಕಾನ್ಸ್‌ಟೇಬಲ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
ಕಚೇರಿಯಿಂದ ವೀಕ್ಷಿಸಿದ್ದ ಡಿಜಿಪಿ:
ತಮ್ಮ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಗಳಿಂದ ದರ್ಶನ್ ಸೆಲ್‌ಗೆ ಖಾಕಿ ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಭೇಟಿಯನ್ನು ಡಿಜಿಪಿ ಅಲೋಕ್ ಕುಮಾರ್ ವೀಕ್ಷಿಸಿದ್ದರು.
ಬಳಿಕ ಗಣರಾಜ್ಯೋತ್ಸವ ನಿಮಿತ್ತ ಜೈಲಿಗೆ ತೆರಳಿದ್ದಾಗ ದರ್ಶನ್‌ಗೆ ತಮ್ಮ ಭೇಟಿಗೆ ಬಂದಿದ್ದವರ ಬಗ್ಗೆ ಡಿಜಿಪಿ ವಿಚಾರಿಸಿದ್ದಾರೆ. ಆಗ ತಮಗೆ ಪರಿಚಯದವರಲ್ಲ. ಬಂದು ಹಾಯ್ ಹೇಳಿದರು. ನಾನು ಮಾತನಾಡಿಸಿದೆ ಅಷ್ಟೇ ಎಂದಿದ್ದಾರೆ. ಆಗ ವಾರ್ಡನ್‌ಪ್ರಭುರನ್ನು ಕರೆಸಿ ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದ್ದು ಈಗ ವರ್ಗಾವಣೆ ಶಿಕ್ಷೆಗೆ ಒಳಗಾಗಿದ್ದಾರೆ.

