ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲೋಕಾಯುಕ್ತರ ದಾಳಿಗೆ ಒಳಗಾದ
ಕೆ.ಪಿ. ಅಗ್ರಹಾರ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು ಕಂಬಿ ಎಣಿಸುವಂತಾಗಿದೆ.
ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚೀಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಕೇಸ್‌ನಲ್ಲಿ ಸಿಕ್ಕಿಸುವುದಾಗಿ ಬೆದರಿಸಿ ಇನ್ಸ್‌ಪೆಕ್ಟರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಅದರಲ್ಲಿ 1 ಲಕ್ಷ ಈಗಾಗಲೇ ಪಡೆದುಕೊಂಡಿದ್ದ ಇನ್ಸ್‌ಪೆಕ್ಟರ್, ಉಳಿದ 4 ಲಕ್ಷ ರೂಪಾಯಿ ಸ್ವೀಕರಿಸುವಾಗ ಟ್ರ್ಯಾಪ್ ಆಗಿದ್ದಾರೆ.
ಸಂತ್ರಸ್ತ ಧನರಾಜ್ ಎಂಬುವವರು ನೀಡಿದ ದೂರಿನನ್ವಯ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿ ಇನ್ಸ್‌ಪೆಕ್ಟರ್ ಗೋವಿಂದರಾಜು ಬಂಧಿಸಿ ಅವರ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.

