ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ವಿಬಿಜಿ ರಾಮ್ ಜಿ ಯೋಜನೆಯನ್ನು ಯಾವ ರಾಜ್ಯವೂ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೇಂದ್ರದ ನೀತಿಯಂತೆ ಅಧಿವೇಶನದಲ್ಲಿ ವಿಬಿಜಿ ರಾಮ್ ಜಿ ಯೋಜನೆಗೆ ವಿರೋಧ ಮಾಡುವ ಕುರಿತು ಮೊನ್ನೆಯೇ ನಮ್ಮ ಸಿಎಲ್ಪಿ ನಾಯಕರಾದ ಸಿಎಂ ಪ್ರಸ್ತಾಪನೆ ಮಾಡಿದ್ದರು.
ಅದನ್ನು ಬಿಸಿನೆಸ್ ಅಡ್ವೈಸರಿ ಕಮಿಟಿಯಲ್ಲಿಟ್ಟು ತೀರ್ಮಾನ ಮಾಡಬೇಕು ಎಂದು ಸ್ಪೀಕರ್ ಹೇಳಿದ್ದರು.
ಈ ಕುರಿತು ಚರ್ಚೆ ಆಗಿದೆ. ಯಾಕೆ ಅದನ್ನು ರದ್ದು ಮಾಡಬೇಕು ಎಂದು ನಾವು ತಿಳಿಸುತ್ತೇವೆ. ಈಗಿನ ನಿಯಮಾವಳಿ ಪ್ರಕಾರ ಕೇಂದ್ರದ ನೀತಿಯಂತೆ ಅದನ್ನು ಜಾರಿ ಮಾಡಲು ಯಾವ ರಾಜ್ಯದವರಿಂದಲೂ ಸಾಧ್ಯವಿಲ್ಲ ಎಂದು ಡಿಸಿಎಂ ತಿಳಿಸಿದರು.
125 ದಿನ ಮಾಡುತ್ತೇವೆ ಅಂತ ಹೇಳಬಹುದು ಅಷ್ಟೇ. ಬೇರೆ ದಿನದಲ್ಲಿ ಕೊಡಲು ಆಗುವುದಿಲ್ಲ. ರಾಜ್ಯಗಳು ತನ್ನ ಪಾಲಿನ ಶೇ.40ರಷ್ಟು ಸಹ ಕೊಡಲಿಕ್ಕೆ ಆಗುವುದಿಲ್ಲ. ಒಂದೊಂದು ಪಂಚಾಯಿತಿಗೆ ಒಂದೂವರೆ ಕೋಟಿ ರೂ. ತನಕ ಕಾಮಗಾರಿ ನಷ್ಟವಾಗುತ್ತಿದೆ. ಉದ್ಯೋಗ ಕಾರ್ಡ್ ಇಟ್ಟುಕೊಂಡವರಿಗೂ ಸಹ ನಷ್ಟ ಉಂಟಾಗುತ್ತದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಅಬಕಾರಿ ಸಚಿವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ಕುರಿತು ಮಾತನಾಡಿದ ಡಿಸಿಎಂ, ಬಿಜೆಪಿಗೆ ಯಾವುದಾದರೂ ಒಂದು ವಿಷಯ ಬೇಕಲ್ಲ. ಅದೆಲ್ಲಾ ತನಿಖೆ ಆಗಬೇಕು. ಆ ಮೇಲೆ ನೋಡೋಣ ಎಂದು ಹೇಳಿದರು.
ಕೇಂದ್ರ ಸರ್ಕಾರ ಯಾವಾಗಲೂ ನಮ್ಮ ಮೇಲೆ ಮಲತಾಯಿ ಧೋರಣೆ ತೋರುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡುತ್ತೇನೆ ಎಂದಿದ್ದರು ಇನ್ನೂ ಕೊಟ್ಟಿಲ್ಲ. ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸಂಸದರು ಹಾಗೂ ಕೇಂದ್ರ ಸಚಿವರು ಧ್ವನಿ ಎತ್ತುತ್ತಿಲ್ಲ. ಇದರಿಂದ ಕೇಂದ್ರದ ಬಜೆಟ್ ಮೇಲೆ ನಮಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ಇಂಧನ ಸಚಿವ ಕೆ. ಜೆ.ಜಾರ್ಜ್ ರಾಜೀನಾಮೆ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಜಾರ್ಜ್ ಬಹಳ ಹಿರಿಯ ರಾಜಕಾರಣಿಗಳಾಗಿದ್ದಾರೆ. ಅವರು ಯಾಕೆ ರಾಜೀನಾಮೆ ನೀಡುತ್ತಾರೆ. ಅದೆಲ್ಲಾ ಸುಳ್ಳು. ಅದೆಲ್ಲಾ ಊಹಾಪೋಹಾ ಅಷ್ಟೇ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

