ತೋಟಗಾರಿಕೆ ಇಲಾಖೆ ಜಾಗ ವಶಕ್ಕೆ ಸಾರ್ವಜನಿಕರ ತೀವ್ರ ವಿರೋಧ…
ಲಭ್ಯ ಇರುವ ಪರ್ಯಾಯ ಜಾಗ ಬಳಸಿ ಡಿಸಿ ಕಚೇರಿ ನಿರ್ಮಿಸಲು ಒತ್ತಾಯ…
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತೋಟಗಾರಿಕೆ ಇಲಾಖೆಗೆ ಸೇರಿದ ಭೂಮಿಯನ್ನು ಜಿಲ್ಲಾಧಿಕಾರಿಗಳ ಭವನ ನಿರ್ಮಾಣಕ್ಕಾಗಿ ಜಿಲ್ಲಾಡಳಿತವು ವಶಪಡಿಸಿಕೊಳ್ಳಲು ಮುಂದಾಗಿರುವ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿರುವ ಸುಮಾರು 6 ಎಕರೆ 30 ಗುಂಟೆ ಜಾಗವನ್ನು ಜಿಲ್ಲಾಡಳಿತ ಕಚೇರಿ ಸಂಕೀರ್ಣಕ್ಕಾಗಿ ಬಳಸಿಕೊಳ್ಳಲು ಉದ್ದೇಶಿಸಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದಾಗಿ ರೈತರ ಯೋಜನೆ ಅನುಷ್ಠಾನ ಮತ್ತು ಹಕ್ಕುಗಳಿಗೆ ಚ್ಯುತಿ ಬಂದಂತಾಗಿದೆ.
ರೈತರ ಹಿತರಕ್ಷಣೆ ದೃಷ್ಠಿಯಿಂದ ಈ ಜಾಗವು ರೈತರಿಗೆ ಅತ್ಯಂತ ಉಪಯುಕ್ತವಾಗಿದ್ದು, ಅವರ ಪಾಲಿನ ಜೀವನಾಡಿಯಂತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಭೂಮಿಯನ್ನು ಬಿಟ್ಟುಕೊಡಬಾರದು ಮತ್ತು ತೋಟಗಾರಿಕೆ ಇಲಾಖೆಯಲ್ಲೇ ಉಳಿಸಬೇಕಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಜಿಲ್ಲಾಧಿಕಾರಿಗಳ ಆಡಳಿತ ಭವನ, ಜಿಲ್ಲಾಧಿಕಾರಿಗಳ ವಸತಿ ಗೃಹ, ತೋಟಗಾರಿಕೆ ಇಲಾಖೆ ಜಾಗದ ಬದಲಿಗೆ, ಲೋಕಾಯುಕ್ತ ಕಚೇರಿಯ ಪಕ್ಕದಲ್ಲೇ ಲಭ್ಯವಿರುವ ಸುಮಾರು 8 ಎಕರೆ ಜಾಗ ಮತ್ತು ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಲೋಕಾಯುಕ್ತ ಕಚೇರಿ, ಉಪ ವಿಭಾಗಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳ ವಸತಿ ಗೃಹಗಳನ್ನು ಬಳಸಿಕೊಂಡಲ್ಲಿ 10 ಎಕರೆಗೂ ಅಧಿಕ ಜಾಗ ಲಭ್ಯವಾಗಲಿದ್ದು ಈ ಪರ್ಯಾಯ ಜಾಗ ಬಳಸಿಕೊಂಡು ಸುಸಜ್ಜಿತವಾದ ಜಿಲ್ಲಾಡಳಿತ ನಿರ್ಮಿಸುವಂತೆ ಹಿರಿಯರು ಸಲಹೆ ನೀಡುತ್ತಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಹಾಗೂ ಜಿಲ್ಲಾಡಳಿತವು ರೈತರ ಹಿತದೃಷ್ಟಿಯಿಂದ ಈ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂಬುದು ರೈತರ ಒತ್ತಾಯವಾಗಿದೆ.


ರೈತರ ಜೀವನಾಡಿ ತೋಟಗಾರಿಕೆ:
ರೈತರ ಜೀವನಾಡಿಯಾದ ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಜಾಗದಲ್ಲಿ ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.
ಚಿತ್ರದುರ್ಗದ ಹೊರ ವಲಯದ ಕುಂಚಿಗನಾಳ್ ಕಣಿವೆ ಗುಡ್ಡದಲ್ಲಿ ಈಗಾಗಲೇ ಸುಮಾರು 50 ಕೋಟಿ ರೂ.ಖರ್ಚು ಮಾಡಿ ಜಿಲ್ಲಾಡಳಿತ ಕಚೇರಿ ನಿರ್ಮಾಣ ಮಾಡಲಾಗಿದೆ.
ಇನ್ನೇನು ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾದ ಸಂದರ್ಭದಲ್ಲಿ ಜಿಲ್ಲಾಡಳಿತ ಭವನ(ಜಿಲ್ಲಾಡಳಿತ ಕಚೇರಿ)ಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಎನ್ನುವ ಕುಂಟು ನೆಪಯೊಡ್ಡಿ ಜಿಲ್ಲಾಧಿಕಾರಿಗಳ ನಿವಾಸ ಸ್ಥಳ ಸೇರಿದಂತೆ ತೋಟಗಾರಿಕೆ ಇಲಾಖೆಯ ಸುಮಾರು 6 ಎಕರೆ 30 ಗುಂಟೆ ಜಾಗದಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಸಲಕ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಸರ್ಕಾರದ ದುಂದು ವೆಚ್ಚಕ್ಕೂ ಕಾರಣವಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳ ಅಭಿಪ್ರಾಯ ಏನಂದರೆ ತೋಟಗಾರಿಕೆ ಇಲಾಖೆಗೆ ಬೇರೆಡೆ ಜಮೀನು ನೀಡಿ ಅಲ್ಲಿ ಹೊಸ ತೋಟಗಾರಿಕೆ ಫಾರಂ ಮತ್ತು ಆಡಳಿತ ಕಚೇರಿ ನಿರ್ಮಾಣ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ. ಈಗಾಗಲೇ ಬೃಹದಾಕಾರವಾಗಿ ತಲೆ ಎತ್ತಿರುವ ರೈತರ ಜೀವನಾಡಿ ತೋಟಗಾರಿಕೆ ಇಲಾಖೆಯ ಜಾಗವೇ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಏಕೆ ಬೇಕು ಎನ್ನುವ ಸ್ಪಷ್ಟ ಕಾರಣವನ್ನು ಜಿಲ್ಲಾಡಳಿತ ನೀಡುತ್ತಿಲ್ಲ.
ತೋಟಗಾರಿಕೆ ಇಲಾಖೆ ಆಸ್ತಿ:
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗಕ್ಕೆ ಹೊಂದಿಕೊಂಡಂತೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ನ್ಯಾಯಾಧೀಶರ ವಸತಿ ಗೃಹಗಳಿವೆ. ಈ ವಸತಿ ಗೃಹಗಳಿಗೆ ಹೊಂದಿಕೊಂಡಂತೆ ಚಿತ್ರದುರ್ಗ ಜಿಲ್ಲಾ ತೋಟಗಾರಿಕೆ ಇಲಾಖೆ ಕಚೇರಿ ಇದೆ. ಒಟ್ಟು 6 ಎಕರೆ 30 ಗಂಟೆ ಜಾಗದಲ್ಲಿ 6.10 ಎಕರೆಯಲ್ಲಿ ಜಿಲ್ಲಾ ಮತ್ತು ತಾಲೂಕು ತೋಟಗಾರಿಕೆ ಇಲಾಖೆ ಕಚೇರಿ, ರಾಜ್ಯ ವಲಯದ ಕಚೇರಿ ಸೇರಿದಂತೆ ಸಾರ್ವಜನಿಕರು ಸಂಜೆ ಮತ್ತು ಬೆಳಿಗ್ಗೆ ಸಮಯದಲ್ಲಿ ವಾಕ್ ಮಾಡಲು ಪಾಥ್ ನಿರ್ಮಿಸಲಾಗಿದೆ. ಜೊತೆಗೆ ವರ್ಷ ಇಂತಿಷ್ಟು ಆದಾಯ ತರುವಂತ ಹಾಪ್ ಕಾಮ್ಸ್ ಮಳಿಗೆಗಳು, ಹಣ್ಣಿನ ಮರಗಳು, ತೋಟಗಾರಿಕೆ ನರ್ಸರಿ ಆದಾಯದ ಮೂಲವಾಗಿವೆ.
ಇದೇ ಆವರಣದಲ್ಲಿ ಸುಮಾರು 20 ಗುಂಟೆ ಜಾಗದಲ್ಲಿ ಹಾಪ್ ಕಾಮ್ಸ್ ಕಚೇರಿ ಮತ್ತು ಹಣ್ಣು ಸಂಸ್ಕರಣಾ ಘಟಕಗಳಿವೆ. ಇಷ್ಟೇಲ್ಲ ಆಸ್ತಿ ಪುನರ್ ಸೃಜಿಸಬೇಕಾದರೆ ನೂರಾರು ಕೋಟಿ ರೂ.ಗಳ ಅಗತ್ಯವಿದೆ. ಮತ್ತೇ ಪುನರ್ ತೋಟಗಾರಿಕೆ ನರ್ಸರಿ ಮಾಡಲು ಎರಡು ದಶಕಗಳು ಬೇಕಾಗಲಿದೆ. ಜೊತೆಗೆ ನೂರಾರು ಕೋಟಿ ರೂ. ಖರ್ಚಾಗಲಿದ್ದು ಸರ್ಕಾರಕ್ಕೆ ಇದು ತುಂಬಾ ಆರ್ಥಿಕ ಹೊರೆ ಉಂಟು ಮಾಡಲಿದೆ. ಆದ್ದರಿಂದ ತೋಟಗಾರಿಕೆ ಜಾಗದಲ್ಲಿ ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಮಾಡುವುದು ಬೇಡ ಎನ್ನುವುದು ರೈತರು ಮತ್ತು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತೋಟಗಾರಿಕೆ ಜಾಗಕ್ಕೆ ದೊಡ್ಡ ಇತಿಹಾಸ:
ಕರ್ನಾಟಕ ತೋಟಗಾರಿಕೆ ಇಲಾಖೆಯ ಪಿತಾಮಹ ದಿವಂಗತ ಡಾ. ಎಂ. ಎಚ್. ಮರಿಗೌಡ ಅವರು ರಾಜ್ಯದ ತೋಟಗಾರಿಕೆ ಇಲಾಖೆಯ ಮೊದಲ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಇಡೀ ರಾಜ್ಯ ಸುತ್ತಿ, ಬಹುತೇಕ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಹೃದಯ ಭಾಗದಲ್ಲಿ ಸಾವಿರಾರು ಎಕರೆ ಜಾಗವನ್ನು ತೋಟಗಾರಿಕೆ ಇಲಾಖೆಗೆ ಪಡೆದು ಇತಿಹಾಸ ನಿರ್ಮಿಸಿದ್ದರು. ಡಾ. ಎಂ. ಎಚ್. ಮರಿಗೌಡರು ರಾಜ್ಯದಾದ್ಯಂತ ಹಣ್ಣು, ತರಕಾರಿ ಮತ್ತು ಹೂವು ಸೇರಿದಂತೆ ಸ್ಥಳೀಯವಾಗಿ ಮಣ್ಣು, ನೀರು ಹಾಗೂ ಹವಾಗುಣಕ್ಕೆ ತಕ್ಕಂತೆ ತೋಟಗಾರಿಕಾ ಬೆಳೆಗಳನ್ನು ಇಲಾಖೆ ಬೆಳೆದು ರೈತರಿಗೆ ಪ್ರೋತ್ಸಾಹಿಸಿ, ಇಲಾಖೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಕ್ರಾಂತಿಕಾರ ಬದಲಾವಣೆ ಮಾಡಿದ್ದರು.
ತೋಟಗಾರಿಕೆ ಇಲಾಖೆಗೆ ಜಾಗ ಪಡೆಯುತ್ತಿದ್ದಂತೆ ಡಾ.ಎಂ.ಎಚ್.ಮರಿಗೌಡರು ರಾಜ್ಯದಾದ್ಯಂತ ತಿರುಗಿ ತೋಟಗಾರಿಕಾ ಬೆಳಗಳ ವಿಸ್ತರಣೆ ಮಾಡಿದರು. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳಲ್ಲಿ ತೋಟಗಾರಿಕಾ ಚಟುವಟಿಕೆಗಳನ್ನು ವಿಸ್ತರಿಸಿ ಕರ್ನಾಟಕದತ್ತ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಮರಿಗೌಡರಿಗೆ ಸಲ್ಲುತ್ತದೆ.
ಲಾಲ್‌ಬಾಗ್ ಅಭಿವೃದ್ಧಿ:
ಇದೇ ಸಂದರ್ಭದಲ್ಲಿ ಮರಿಗೌಡರು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಕೋರ್ಸ್‌ಗಳನ್ನು ಪರಿಚಯಿಸಿ, ಅದನ್ನು ವಿಶ್ವಪ್ರಸಿದ್ಧ ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸಿದರು.
ರೈತ ಸ್ನೇಹಿ ಯೋಜನೆ:
ತೋಟಗಾರಿಕೆ ಇಲಾಖೆಗೆ ಸಾವಿರಾರು ಎಕರೆ ಜಾಗ ಮಾಡಿ ಸುಮ್ಮನೆ ಕೂರದ ಮರಿಗೌಡರು ರೈತರಿಗೆ ಪ್ರೋತ್ಸಾಹಿಸಲು ತೋಟಗಾರಿಕಾ ಫಾರ್ಮ್‌ಗಳು ಮತ್ತು ಮಳಿಗೆಗಳನ್ನು ಸ್ಥಾಪಿಸಿ, ತಾಂತ್ರಿಕ ಸಹಾಯ ಒದಗಿಸಿದರು. ಅವರ ದೂರದೃಷ್ಟಿಯಿಂದಾಗಿ ಕರ್ನಾಟಕ ರಾಜ್ಯವು ತೋಟಗಾರಿಕೆಯಲ್ಲಿ ಭಾರಿ ಪ್ರಗತಿ ಸಾಧಿಸಿರುವುದು ಇತಿಹಾಸದಿಂದ ತಿಳಿದು ಬರಲಿದೆ.
ಸ್ಥಳಾಂತರ ಬೇಡ:
ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಜನರಿಗೆ ಅನುಕೂಲವಾಗುವಂತೆ ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ಉದ್ದೇಶಿಸಿರುವುದನ್ನು ಕೂಡಲೇ ಕೈಬಿಡಬೇಕು. ಯಾವುದೇ ಕಾರಣಕ್ಕೂ ತೋಟಗಾರಿಕೆ ಇಲಾಖೆ ಜಾಗವನ್ನು ಜಿಲ್ಲಾಡಳಿತ ಪಡೆಯಬಾರದು.
ಪರ್ಯಾಯ ವ್ಯವಸ್ಥೆ:
ತೋಟಗಾರಿಕೆ ಇಲಾಖೆ ಪಕ್ಕದಲ್ಲೇ ಸುಮಾರು 8 ರಿಂದ 10 ಎಕರೆ ಜಾಗ ಲಭ್ಯವಿದ್ದು ಈ ಜಾಗದಲ್ಲಿ ನೂತನ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಿಸಲಿ. ಇದೇ ಜಾಗಕ್ಕೆ ಮೂಲ ಸೌಕರ್ಯ ಒದಗಿಸಿ ಹೈಟೆಕ್ ಜಿಲ್ಲಾಡಳಿತ ಭವನ ನಿರ್ಮಿಸುವುದು ಅತ್ಯಂತ ಸೂಕ್ತವಾಗಿದೆ.
ಪ್ರಸ್ತಾವನೆ ಸಲ್ಲಿಕೆ:
ಈಗಾಗಲೇ ತೋಟಗಾರಿಕೆ ಇಲಾಖೆಯ ಸುಮಾರು 6.30 ಎಕರೆ ಜಾಗವನ್ನು ಜಿಲ್ಲಾಡಳಿತ ಭವನ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗುತ್ತಿದೆ.
ಕೆಡವಿ ಕಟ್ಟುವುದು ಯಾಕೆ:
ಜಿಲ್ಲಾಡಳಿತ ಕಚೇರಿ ನಗರದ ಹೊರ ಭಾಗದಲ್ಲಿದ್ದರೆ ನಗರ ಬೆಳೆಯುವುದು ಒಂದು ಕಡೆ ಆದರೆ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.
ದಾವಣಗೆರೆ, ಹಾವೇರಿ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳ ಆಡಳಿತ ಕಚೇರಿ ನಗರದಿಂದ ಏಳೆಂಟು ಕಿಲೋ ಮೀಟರ್ ದೂರದಲ್ಲಿ ನಿರ್ಮಿಸಲಾಗಿದೆ.
ನಗರದ ಹೊರ ವಲಯದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಅದೇ ಮಾದರಿಯನ್ನು ಚಿತ್ರದುರ್ಗದಲ್ಲೂ ಅನುಸರಿಸಲಿ ಎನ್ನವುದು ಜನ ಸಾಮಾನ್ಯರ ಅಭಿಪ್ರಾಯವಾಗಿದೆ.
“ಚಿತ್ರದುರ್ಗದಂತೆ ತುಮಕೂರಿನಲ್ಲೂ ತೋಟಗಾರಿಕೆ ಇಲಾಖೆ ಜಾಗ ಪಡೆಯಲು ಜಿಲ್ಲಾಡಳಿತ ಸಜ್ಜಾಗಿರುವುದು ಪಿರ್ಯಾಸ. ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಹೃದಯ ಭಾಗದಲ್ಲೇ ಕೋಟ್ಯಂತರ ರೂ.ಬೆಲೆ ಬಾಳುವ ಜಾಗವನ್ನ ತೋಟಗಾರಿಕೆ ಇಲಾಖೆ ಹೊಂದಿದ್ದು ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಆಡಳಿತ ಕಚೇರಿ ನಿರ್ಮಿಸಲು ತೋಟಗಾರಿಕೆ ಜಾಗ ವಶ ಪಡಿಸಿಕೊಳ್ಳುವ ಆತಂಕವಿದೆ”.
ಹನುಮಂತರಾಯಪ್ಪ, ಪ್ರಗತಿಪರ ರೈತ, ಲಕ್ಕನಹಳ್ಳಿ.
“ತೋಟಗಾರಿಕೆ ಜಾಗದಲ್ಲಿ ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಿಸುವುದು ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಈ ಪ್ರಸ್ತಾವನೆಗೆ ಕೂಡಲೇ ತಡೆ ನೀಡಬೇಕು. ತೋಟಗಾರಿಕೆ ಇಲಾಖೆಯ ಜಾಗ ಉಳಿದರೆ ರೈತರಿಗೆ ಅನೇಕ ಅನುಕೂಲ ಕಲ್ಪಿಸಲು ಸಾಧ್ಯವಾಗಲಿದೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿ ತೀರ್ಮಾನಿಸಬೇಕು. ಇದು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಬೇಡಿಕೆ ಸಲ್ಲಿಸಲಾಗುತ್ತದೆ”.
ಸಜ್ಜನಕರೆ ಜಿ.ಸಿದ್ದಪ್ಪ, ಪ್ರಗತಿಪರ ರೈತರು, ಸಜ್ಜನಕೆರೆ.
“ನಗರ ವ್ಯಾಪ್ತಿಯ ತೋಟಗಾರಿಕೆ ಕಚೇರಿ ಜಾಗದಲ್ಲೇ ಮಹಿಳೆಯರು, ಮಕ್ಕಳು, ವಯೋವೃದ್ಧರು ಸಂಜೆ, ಬೆಳಿಗ್ಗೆ ವಾಕ್ ಮಾಡಲು ಪಾಥ್ ನಿರ್ಮಿಸಲಾಗಿದೆ. ಇದರಿಂದಾಗಿ ಸಾಕಷ್ಟು ಅನುಕೂಲವಾಗಿದೆ. ಅಲ್ಲದೆ ಪ್ರತಿ ವರ್ಷ ತೋಟಗಾರಿಕೆ ಇಲಾಖೆ ಜಾಗದಲ್ಲೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ನಗರದಿಂದ ಹತ್ತಾರು ಕಿಲೋ ಮೀಟರ್ ದೂರದಲ್ಲಿ ತೋಟಗಾರಿಕೆ ಇಲಾಖೆಗೆ ಜಾಗ ನೀಡಿ ಅಲ್ಲಿ ನರ್ಸರಿ ಮಾಡಿದರೆ ಯಾವ ರೈತರು ಹೋಗುವುದಿಲ್ಲ. ಜೊತೆಗೆ ಫಲಪುಷ್ಪ ಪ್ರದರ್ಶನಕ್ಕೂ ಜನರು ಹೋಗುವುದು ಕಷ್ಟವಾಗಲಿದೆ. ಆದ್ದರಿಂದ ತೋಟಗಾರಿಕೆ ಜಾಗ ಉಳಿಸಬೇಕು”.
ಶ್ರೀಮತಿ ಸುಜಯ್ ಶಿವಪ್ರಕಾಶ್, ಹಿರಿಯ ನಾಗರೀಕರು ಹಾಗೂ ಹಾಪ್ ಕಾಮ್ಸ್ ಪದಾಧಿಕಾರಿಗಳು.

