ಚಂದ್ರವಳ್ಳಿ ನ್ಯೂಸ್, ತುಮಕೂರು:
ಪೊಲೀಸರ ವಶದಲ್ಲಿದ್ದ ಕಾರನ್ನು ಬಿಡಿಸಿಕೊಳ್ಳಲು ಕಾರು ಮಾಲೀಕನಿಗೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಪೊಲೀಸ್‌ಸಬ್ ಇನ್ಸ್ಪೆಕ್ಟರ್ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ತುಮಕೂರು ಲೋಕಾಯುಕ್ತ ಪೊಲೀಸ್‌ಎಸ್ಪಿ ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.
ಕಾರನ್ನು ಮಾಲೀಕರಿಗೆ ಹಿಂದಿರುಗಿಸಲು ಐದು ಲಕ್ಷ ಲಂಚಕ್ಕೆ ಒತ್ತಾಯ ಮಾಡಿ, 40,000 ರೂ. ಲಂಚದ ಹಣ ಸ್ವೀಕರಿಸಿ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಅವರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಾಗದೇವನಹಳ್ಳಿಯ ನಾಗೇಶ್.ಎಸ್.ಕೆ ಅವರು ಶಿಕ್ಷಕರಾಗಿದ್ದು, ಸ್ವಂತ ಫ್ರಾಕ್ಸೆಲ್ ಅಕಾಡೆಮಿ ನಡೆಸುತ್ತಿದ್ದಾರೆ. ವಾರಂತ್ಯವಾದ್ದರಿಂದ 2026ರ ಜ.17 ರಂದು ಸ್ನೇಹಿತರೊಂದಿಗೆ ತಮ್ಮ ಕಿಯಾ ಸೋನೆಟ್ ಕಾರಿನಲ್ಲಿ ತುಮಕೂರು ನಗರದ ಕೆಸರುಮಡುಗೆ ಬಂದಿದ್ದರು.
ಅದೇ ದಿನ ಸಂಜೆ 06.30ಕ್ಕೆ ವಾಪಸ್ ತೆರಳುವಾಗ ಕೆಸರುಮಡು ದರ್ಗ ಸರ್ಕಲ್‌ನಲ್ಲಿ ಟೀ ಕುಡಿಯಲು ಕಾರು ನಿಲ್ಲಿಸಿದ್ದರು. ಆಗ ಆ ಕಾರನ್ನು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಚೇತನ್‌ಕುಮಾರ್ ಅವರು ಟೋಯಿಂಗ್ ಮಾಡಿಕೊಂಡು ತೆಗೆದುಕೊಂಡು ಹೋಗಿ, ಠಾಣೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದರು.
ಕಾರಿನ ಮಾಲೀಕ ನಾಗೇಶ್‌ಅವರು ಪಿಎಸ್ಐ ಚೇತನ್‌ಕುಮಾರ್ ಅವರನ್ನು ಭೇಟಿ ಮಾಡಿ, ಕಾರನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಾಗ, ನೀವು ಗಾಂಜಾ ಹೊಡೆದಿದ್ದೀರೆಂದು ಕೇಸ್ ಬುಕ್ ಮಾಡುತ್ತೇನೆ, ಕಾರನ್ನು ಕೋರ್ಟಿನಲ್ಲಿ ಬಿಡಿಸಿಕೊಳ್ಳಿ. ಇಲ್ಲವಾದಲ್ಲಿ 5 ಲಕ್ಷ ರೂ. ಹಣ ಕೊಟ್ಟು ಕಾರ್ ತೆಗೆದುಕೊಂಡು ಹೋಗಿ ಎಂದು ಲಂಚಕ್ಕೆ ಒತ್ತಾಯ ಮಾಡಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಅಂದಿನಿಂದ ಜನವರಿ 29ರವರೆಗೆ ನಾಗೇಶ್ ಅವರು ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ, ಕಡಿಮೆ ಮಾಡಿಕೊಳ್ಳಿ ಎಂದು ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಕೊನೆಗೆ ಸಬ್ಇನ್ಸ್ಪೆಕ್ಟರ್ ಚೇತನ್‌ಕುಮಾರ್ ಅವರು 40,000 ರೂ ನೀಡಿ ಕಾರು ತೆಗೆದುಕೊಂಡು ಹೋಗಲು ತಿಳಿಸಿದ್ದರು.
ನಾಗೇಶ್ ಅವರಿಗೆ ಲಂಚ ನೀಡಲು ಇಷ್ಟವಿಲ್ಲದೇ ಜ.30 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ ಅವರು ಕಲಂ-7(3) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ-2018) ರಂತೆ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲು ಪೊಲೀಸ್ ಉಪಾಧೀಕ್ಷಕ ಮಂಜುನಾಥ.ಎಂ ಅವರಿಗೆ ಆದೇಶಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಟ್ರ್ಯಾಪ್ ಕಾರ್ಯಾಚರಣೆ ವೇಳೆ ಶುಕ್ರವಾರ ರಾತ್ರಿ ಸುಮಾರು 10.10 ಗಂಟೆಗೆ ಚೇತನ್‌ಕುಮಾರ್ ಸೂಚನೆಯಂತೆ ನಾಗೇಶ್ 40,000 ರೂ ಲಂಚವನ್ನು ಜಾಸ್‌ಟೋಲ್ ಬಳಿ ಇರುವ ಹೋಟೆಲ್ನ ಕ್ಯಾಷಿಯರ್ ಸಪ್ಲರ್ ಅಲಿಖಾನ್ಗೆ ನೀಡಿದ್ದರು.
ಕೂಡಲೇ ತನಿಖಾಧಿಕಾರಿ ಪೊಲೀಸ್ ಉಪಾಧೀಕ್ಷಕರ ನೇತೃತ್ವದ ತಂಡ ಲಂಚದ ಹಣದ ಸಮೇತ ಕ್ಯಾಷಿಯರ್‌ನನ್ನು ವಶಕ್ಕೆ ಪಡೆದಿದ್ದರು. ನಂತರ ರಾತ್ರಿ 02-00 ಗಂಟೆಗೆ ಪಿಎಸ್ಐ ಚೇತನ್‌ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಬಳಿಕ ಬಂಧಿಸಿ, ಮುಂದಿನ ತನಿಖಾ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಶನಿವಾರ ಸಬ್ಇನ್ಸ್ಪೆಕ್ಟರ್ ಚೇತನ್‌ಕುಮಾರ್‌ಅವರನ್ನು 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಮಾಹಿತಿ ನೀಡಿದ್ದಾರೆ.

