ಚಂದ್ರವಳ್ಳಿ ನ್ಯೂಸ್, ತಿಪಟೂರು:
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ರಂಗನಹಳ್ಳಿ ಶ್ರೀ ಶಿವಸತ್ಯ ಶನೈಶ್ಚರ ಸ್ವಾಮಿ ಸುಕ್ಷೇತ್ರದಲ್ಲಿ ಶ್ರೀ ಶಿವಸತ್ಯ ಶನೈಶ್ಚರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ದೇವಿ ಹಾಗೂ ಆದಿಪರಾಶಕ್ತಿ ಕಾಳಿಕಾದೇವಿರವರ 22ನೇ ವರ್ಷದ ಜಾತ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಅವರು ಪಾಲ್ಗೊಂಡು, ದೇವರಿಗೆ ವಿಶೇಷಪೂಜೆ ಸಲ್ಲಿಸಿ, ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ , ನಮ್ಮ ಹಿರಿಕರು ನಮಗೆ ಬಿಟ್ಟುಹೋದ ಆಸ್ತಿಯಾದ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿ- ಬೆಳೆಸೋಣ. ಜಾತ್ರಾ ಮಹೋತ್ಸವದ ಅಂಗವಾಗಿ ನಡೆದಿರುವ ಅನ್ನದಾಸೋಹವು ಜಾತಿ, ಧರ್ಮಮೀರಿದ ದಾಸೋಹ ಇದು ಮನಸ್ಸು, ಮನಸ್ಸುಗಳ ಸಮ್ಮಿಲನ ಎಂದು ತಿಳಿಸಿ, ಪ್ರತಿವರ್ಷ ಈ ಜಾತ್ರಾ ಮಹೋತ್ಸವದಲ್ಲಿ ತಪ್ಪದೇ ಭಾಗವಹಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮೈಸೂರಿನ ಶ್ರೀ ತ್ರಿಶೋಭಾನಂದ ಮಹಾಸ್ವಾಮಿಜಿ, ದಾಬಸಪೇಟೆ ವನಕಲ್ಲು ಮಠದ ಶ್ರೀ ಬಸವರಮಾನಂದ ಮಹಾಸ್ವಾಮಿಗಳು, ಅಖಿಲ ಭಾರತ ಅಘೋರ್ ಭೈರವ್ ಮಹಾಸಭಾ ಅಧ್ಯಕ್ಷ ಡಾ. ಅಗರ್ಭನಾಥ್ ಅಘೋರ್ ಭೈರವಿಯವರ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಂ.ಟಿ. ಕೃಷ್ಣಪ್ಪ, ಮುಖಂಡ ಕೆ.ಟಿ. ಶಾಂತಕುಮಾರ್ ಸೇರಿದಂತೆ ಪಕ್ಷದ ಮುಖಂಡರು, ಗ್ರಾಮದ ಗುರುಹಿರಿಯರು, ತಾಯಂದಿರು , ಅಣ್ಣತಮ್ಮಂದಿರು ಉಪಸ್ಥಿತರಿದ್ದರು.

