ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ..,
ಹುಲ್ಲಿನ ಬಣಿವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಬೆಂಕಿಯ ಕೆನ್ನಾಲಿಗೆಗೆ ಹುಲ್ಲಿನ ಬಣಿವೆ ಸುಟ್ಟುಕರಕಲಾಗಿರುವ ಘಟನೆ ಶನಿವಾರ ಮಧ್ಯಾಹ್ನ ಕಸಬಾ ಹೋಬಳಿ ಕಂಟನಕುಂಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರು ಸಂಗ್ರಹಿಸಿಕೊಂಡಿದ್ದ ಹುಲ್ಲಿನ ಬಣಿವೆ ಸಮೀಪವೇ ನೀಲಗಿರಿ ತೋಪು ಇದ್ದು ಇಲ್ಲಿ ಬೆಂಕಿ ಬಿದ್ದು, ಬಣಿವೆಗೂ ಹಬ್ಬಿದೆ ಎನ್ನಲಾಗಿದೆ. ಬೇಸಿಗೆ ಕಾಲದಲ್ಲಿ ಹಸುಗಳಿಗಾಗಿ ಕೂಡಿಟ್ಟ ಮೇವು ಸಂಪೂರ್ಣ ಭಸ್ಮವಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
ಬೇಸಿಗೆ ಸಮೀಪಿಸುತ್ತಿದ್ದಂತೆ ಬೆಂಕಿ ಅವಘಡಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದ್ದು ರಸ್ತೆ ಬದಿಯ ಕಸ, ಒಣಗಿದ ಎಲೆಗಳು, ನೀಲಗಿರಿ ತೋಪುಗಳ ಬಳಿ ಬೆಂಕಿ ಹಚ್ಚುತ್ತಿರುವುದು ಸಾಮಾನ್ಯವಾಗಿದೆ. ಕಳೆದ ವರ್ಷ ಇದೇ ರೀತಿ ಹರಡಿದ ಬೆಂಕಿ ಒಂದು ಮನೆಯನ್ನೇ ಆಹುತಿ ಪಡೆದಿತ್ತು. ಈ ದಿಸೆಯಲ್ಲಿ ಕಿಡಿಗೆ ಹುಲ್ಲಿನ ಬಣಿ ವೆಗಳು ಹಾಗೂ ಇತರೆ ವಸ್ತುಗಳು ಸಿಗದಂತೆ ಎಚ್ಚರ ವಹಿಸಬೇಕು. ಯಾವುದೇ ವಸ್ತುಗಳಿಗೆ ಬೆಂಕಿಹಾಕದಂತೆ ಅದನ್ನು ಸೂಕ್ತ ವಿಲೇವಾರಿ ಮಾಡುವತ್ತ ಗಮನ ಹರಿಸಬೇಕಿದೆ.
ಬೇಸಿಗೆ ಕಾಲದಲ್ಲಿ ಹಸುಗಳಿಗೆ ಕೂಡಿಟ್ಟ ಮೇವು ಬೆಂಕಿಯ ಕೆನ್ನಾಲಿಗೆಯಿಂದ ಸಂಪೂರ್ಣ ಭಸ್ಮವಾಗಿರುವ ಘಟನೆಯಿಂದ ರೈತರು ಸಂಕಷ್ಟಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಬೆಂಕಿಯ ಅನಾಹುತದಿಂದ ನಷ್ಟದಿಂದ ಕಂಗೆಟ್ಟಿರುವ ರೈತರ ನೆರವಿಗೆ ಮುಂದಾಗಬೇಕಿದೆ.

