ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎನ್.ಲಕ್ಷ್ಮಣ ಬಿನ್ ನಾರಾಯಣಪ್ಪ, ಕುಂದಾಣ ಗ್ರಾಮ & ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಸಾಸಲು ಗ್ರಾಮದ ಸರ್ವೆ ನಂಬರ್ 26/2 ರಲ್ಲಿ 0-30 ಗಂಟೆ ಜಮೀನಿನ 11 ಇ ನಕ್ಷೆಯನ್ನು ಪಡೆಯಲು ಆನ್ಲೈನ್ನಲ್ಲಿ ಅರ್ಜಿಯನ್ನು ತಾಲ್ಲೂಕು ಕಛೇರಿಯಲ್ಲಿ ಸಲ್ಲಿಸಿದ್ದು, ಈ ಸಂಬಂಧ ಆರೋಪಿತರಾದ ಸರ್ವೆಯರ್ ಡಿ.ಬಿ ಗೌಡ ಎಂಬುವರು ಜಮೀನಿನ ಸರ್ವೆ ಕಾರ್ಯ ನಡೆಸಿದ್ದು, ಪಿರ್ಯಾದಿಯವರು ಸರ್ವೆ ನಕ್ಷೆ ಬಗ್ಗೆ ವಿಚಾರಿಸಿದಾಗ ಆರೋಪಿತ ಡಿ.ಬಿ ಗೌಡ ರವರು 3000/- ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಅದೇ ದಿನ ಪಡೆದುಕೊಂಡು,
ಪಿರ್ಯಾದಿಯವರ ಸರ್ವೆ ನಕ್ಷೆ ಮಾಡಿಕೊಡದೇ ಇದ್ದು, ಮತ್ತೊಮ್ಮೆ ಪಿರ್ಯಾದಿ ಆರೋಪಿತ ಡಿ.ಬಿ ಗೌಡ ರವರನ್ನು ಭೇಟಿ ಮಾಡಿ ಸರ್ವೆ ನಕ್ಷೆ ಆಗಿರುವ ಬಗ್ಗೆ ವಿಚಾರಿಸಿದಾಗ ಆರೋಪಿತರು 11 ಇ ನಕ್ಷೆ ಮಾಡಿಕೊಡಲು ದಿನಾಂಕ: 29-11-2013 ರಂದು ಆಪಾದಿತರಾದ ಪಿರ್ಯಾದುದಾರರನ್ನು ರೂ.3,000/- ಗಳ ಲಂಚದ ಹಣಕ್ಕೆ ಒತ್ತಾಯಿಸಿ, ನಂತರ ದಿನಾಂಕ:03/12/2013 ರಂದು ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಿರ್ಯಾದಿದಾರರಿಂದ ಆರೋಪಿತರು ಲಂಚದ ಹಣವನ್ನು ಸ್ವೀಕರಿಸಿ ಟ್ರ್ಯಾಪ್ ತಂಡಕ್ಕೆ ಸಿಕ್ಕಿಬಿದ್ದಿರುತ್ತಾರೆ.
ಸುಬ್ರಮಣ್ಯ, ಪೊಲೀಸ್ ಇನ್ಸ್ಪೆಕ್ಟರ್, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಪ್ರಕರಣದ ತನಿಖೆ ನಡೆಸಿದ್ದು, ಎಂ.ಜೆ ದಯಾನಂದ, ಪೊಲೀಸ್ ಇನ್ಸ್ಪೆಕ್ಟರ್, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಆರೋಪಿತರ ವಿರುದ್ದ ಘನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ಸನ್ನಿದಾನಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಸದರಿ ಪ್ರಕರಣವು ಘನ ನ್ಯಾಯಾಲಯದಲ್ಲಿ ಸಿಸಿ 193/2015 ರಂತೆ ವಿಚಾರಣೆ ನಡೆದಿರುತ್ತದೆ.
ದಿನಾಂಕ:30/01/2026 ರಂದು ಘನ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ್ ರವರು ಸದರಿ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಿದ್ದು, ತೀರ್ಪಿನಲ್ಲಿ ಆರೋಪಿತರಾದ ಡಿ.ಬಿ.ಗೌಡ, ಖಾಸಗಿ ಸರ್ವೇಯರ್, ದೇವನಹಳ್ಳಿ ತಾಲ್ಲೂಕು ರವರ ವಿರುದ್ದ ಆರೋಪ ಸಾಬೀತಾಗಿರುವುದರಿಂದ ಸದರಿ ಆರೋಪಿತರಿಗೆ ಭ್ರಷ್ಟಾಚಾರ ತಡೆ ಕಾಯ್ದೆ ಕಲಂ:7 ರಡಿಯಲ್ಲಿ ಆರು ತಿಂಗಳ ಸರಳ ಜೈಲು ಶಿಕ್ಷೆ ಮತ್ತು ರೂ 10,000 ರೂ. ದಂಡ ಮತ್ತು ಕಲಂ:13(1)(ಡಿ) ರ/ಜೋ 13(2) ರಡಿಯಲ್ಲಿ ಆರೋಪಿಗೆ ಒಂದು ವರ್ಷ ಸರಳ ಜೈಲು ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿರುತ್ತಾರೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಮೂರು ತಿಂಗಳ ಸರಳ ಜೈಲು ಶಿಕ್ಷೆ ವಿದಿಸಿ ತೀರ್ಪು ನೀಡಿರುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಶಿಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

