ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಹಿಳಾ ಉದ್ಯಮಿಗಳು ತಾವು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ಅನುಕೂಲವಾಗುವಂತೆ ‘ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆಪ್’ ಅನ್ನು ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯ ಅರ್ಹ ಮಹಿಳಾ ಉದ್ಯಮಿಗಳು ಇದರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
2026 ಜನವರಿ 9ರಂದು ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆಪ್ ಲಾಂಚ್ ಮಾಡಲಾಗಿದ್ದು, ಈ ಆಪ್‍ನಲ್ಲಿ ನೋಂದಾಯಿಸಿಕೊಳ್ಳಲು ಜಿಲ್ಲೆಯ ಮಹಿಳಾ ಉದ್ಯಮಿಗಳಿಗೆ ಅವಕಾಶ ನೀಡಲಾಗಿದೆ. ಸ್ತ್ರೀಶಕ್ತಿ ಸ್ವ-ಸಹಾಯ ಗುಂಪಿನ ಸದಸ್ಯರು, ಎನ್‍ಆರ್‍ಎಲ್‍ಎಂ ಫಲಾನುಭವಿಗಳು, ಎನ್‍ಆರ್‍ಎಲ್‍ಎಂ ಉದ್ಯಮಿಗಳು, ಅಕ್ಕ ಕೆಫೆ ಘಟಕಗಳ ನಿರ್ವಹಿಸುತ್ತಿರುವ ಮಹಿಳೆಯರು,
ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್ ಘಟಕಗಳ ಮಹಿಳಾ ಉದ್ಯಮಿಗಳು, ರುಡ್‍ಸೆಟ್ ಮೂಲಕ ತರಬೇತಿ ಪಡೆದು ಸ್ವ-ಉದ್ಯೋಗ ನಡೆಸುತ್ತಿರುವ ಮಹಿಳೆಯರು, ನಿಗಮದ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆದ ಮಹಿಳಾ ಫಲಾನುಭವಿಗಳು, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಉದ್ಯಮಿಗಳು ನೋಂದಾಯಿಸಿಕೊಳ್ಳಬಹುದಾಗಿದೆ.
ಆಸಕ್ತ ಮಹಿಳೆಯರು ತಾವು ತಯಾರಿಸುವ ಉತ್ಪನ್ನಗಳ ಸಂಪೂರ್ಣ ಮಾಹಿತಿಯೊಂದಿಗೆ ಚಿತ್ರದುರ್ಗ ನಗರದ ಸ್ಟೇಡಿಯಂ ಹತ್ತಿರದ ಜಿಲ್ಲಾ ಬಾಲಭವನ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮಹಿಳಾ ಅಭಿವೃದ್ಧಿ ನಿರೀಕ್ಷಕರನ್ನು ಸಂಪರ್ಕಿಸಿ ತಮ್ಮ ವಿವರಗಳನ್ನು ಒದಗಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7019967954 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

