ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತಂಡದ ತನಿಖಾ ವರದಿ ಬರಲಿದೆ. ಅಲ್ಲಿಯತನಕ ಕಾದು ನೋಡೋಣ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯಗಳಿಂದರಾಯ್ ಅವರಿಗೆ ಕಿರುಕುಳವಿತ್ತು ಎಂಬ ಅವರ ಆಪ್ತರ ಆರೋಪಗಳ ಕುರಿತು ವಿಧಾನಸೌಧದ ಬಳಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಅನಗತ್ಯ ಮತ್ತು ಊಹಾಪೋಹಾಗಳಿಂದ ಕೂಡಿದ ಹೇಳಿ ನೀಡಬಾರದು ಎಂಬ ಕಾರಣದಿಂದಲೇ ತಕ್ಷಣ ಎಸ್‌ಐಟಿ ರಚನೆ ಮಾಡಿದ್ದು ಎಸ್‌ಐಟಿ ತನಿಖಾ ತಂಡದ ವರದಿ ಏನು ಬರುತ್ತದೆ, ಯಾರ ಪಾತ್ರ ಏನಿದೆ ಎಂದು ನೋಡಬೇಕಾಗುತ್ತದೆ ಎಂದು ತಿಳಿಸಿದರು.
ತನಿಖೆ ಚುರುಕು:
ಉದ್ಯಮಿ ರಾಯ್ ಅವರ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿ ತನಿಖಾ ತಂಡ ಎಲ್ಲ ಮಗ್ಗಲುಗಳಿಂದ ತನಿಖೆ ಮಾಡುತ್ತಿದೆ. ರಾಯ್ ಅವರ ಕುಟುಂಬಸ್ಥರ ಹೇಳಿಕೆ ದಾಖಲಿಸಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಏತನ್ಮಧ್ಯೆ ರಾಯ್ ಅವರು ತಮ್ಮ ದಿನನಿತ್ಯದ ಆಗುಹೋಗುಗಳ ಬಗ್ಗೆ ಬರೆಯುತ್ತಿದ್ದ ಡೈರಿಯನ್ನ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾಯ್ ಅವರ ನಿತ್ಯದ ಭೇಟಿಗಳು, ವ್ಯವಹಾರಿಕ ನಿರ್ಧಾರಗಳ ಕುರಿತು ಡೈರಿಯಲ್ಲಿ ಬರೆದಿರುವುದು ಪತ್ತೆಯಾಗಿದೆ. ಆದರೆ ಡೈರಿಯಲ್ಲಿರುವ ಅಂಶಗಳನ್ನ ಡೆತ್ ನೋಟ್ ಎನ್ನಲಾಗದು ಎಂಬ ಮಾಹಿತಿಯನ್ನ ಎಸ್ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತಮ್ಮ ಸಾವಿಗೆ ನಿರ್ದಿಷ್ಟ ಕಾರಣವೇನು ರಾಯ್ ಅವರು ಡೈರಿಯಲ್ಲಿ ಉಲ್ಲೇಖಿಸಿಲ್ಲ ಹಾಗೂ ಯಾವುದೇ ಅಂತಿಮ ಸಂದೇಶವನ್ನೂ ನಮೂದಿಸಿಲ್ಲ. ಹೀಗಾಗಿ ಅವರು ಬರೆಯುತ್ತಿದ್ದ ಸಾಮಾನ್ಯ ದಿನಚರಿಯನ್ನೇ ಡೆತ್ ನೋಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರಾಯ್ ಅವರು ತಮ್ಮ ಆತ್ಮಹತ್ಯೆಗೆ ಬಳಸಿರುವ ಪಿಸ್ತೂಲ್‌ನ್ನ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಲ್ಜಿಯಮ್ ಮೇಡ್ ಸ್ಮಾರ್ಟ್, ಮಿನಿ ಸೌಂಡ್‌ಲೆಸ್ ಪಿಸ್ತೂಲ್ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೇಲ್ನೋಟಕ್ಕೆ ಇದು ಪರವಾನಗಿ ಪಡೆದಿರುವ ಪಿಸ್ತೂಲ್ ಎಂಬುದು ತಿಳಿದು ಬಂದಿದೆ. ಆದರೂ ಪಿಸ್ತೂಲ್ ಹಾಗೂ ಬುಲೆಟ್‌ಗಳನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಂಶಿಕೃಷ್ಣ ನೇತೃತ್ವದ ಎಸ್ಐಟಿ:
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸರ್ಕಾರದ ಅನುಮತಿ ಮೇರೆಗೆ ನಗರ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ಎಸ್ಐಟಿ ತಂಡ ರಚಿಸಿದ್ದಾರೆ.
ದಕ್ಷಿಣ ವಿಭಾಗದ ಡಿಸಿಪಿ ಲೊಕೇಶ್ ಜಗಲಾಸರ್ ಪ್ರಕರಣದ ತನಿಖಾಧಿಕಾರಿಯಾಗಿ ನಿಯೋಜಿಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಾಕೆ, ಹಲಸೂರು ಗೇಟ್ ಉಪವಿಭಾಗದ ಎಸಿಪಿ ಸುಧೀರ್, ಸಿಸಿಆರ್ ಬಿ ರಾಮಚಂದ್ರ ಹಾಗೂ ಅಶೋಕನಗರ ಇನ್ಸ್ಪೆಕ್ಟರ್ ಕೆ.ಬಿ.ರವಿ ಅವರು ತಂಡದಲ್ಲಿ ಇದ್ದಾರೆ.
ಉದ್ಯಮಿ ರಾಯ್ ಅವರ ಅಸಹಜ ಸಾವು ಪ್ರಕರಣ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದನ್ನ ಎಸ್ಐಟಿ ತಂಡಕ್ಕೆ ಹಸ್ತಾಂತರಿಸಲಾಗಿದೆ.

