ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆ ಬಿಟ್ಟು ಹೋಗಿದ್ದ ಮಕ್ಕಳಿಬ್ಬರನ್ನು ಹೆಚ್ಎಎಲ್ ಠಾಣೆ ಪೊಲೀಸರು ಪತ್ತೆ ಹಚ್ಚಿ ಕುಟುಂಬಕ್ಕೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೋಷಕರು ಬೈದಿದ್ದಕ್ಕೆ ಫೆಬ್ರವರಿ 1ರಂದು ಮಾರತ್ ಹಳ್ಳಿಯ ಅಶ್ವಥ್ ನಗರದ ಮನೆಯಿಂದ ಮಕ್ಕಳಿಬ್ಬರು ತೆರಳಿದ್ದರು. 9 ವರ್ಷದ ಸಹೋದರನೊಂದಿಗೆ ಮನೆ ಬಿಟ್ಟು ತೆರಳಿದ್ದ 13 ವರ್ಷದ ಬಾಲಕಿಯನ್ನು ಪತ್ತೆ ಹಚ್ಚಲಾಗಿದ್ದು, ಪೋಷಕರಿಗೆ ಒಪ್ಪಿಸಲಾಗಿದೆ.
ಅಕ್ಕ -ತಮ್ಮನಿಗೆ ಪೋಷಕರು ಟ್ಯೂಷನ್‌ಗೆ ಹೋಗುತ್ತಿಲ್ಲವೆಂದು ಬೈದಿದ್ದರು. ಇದರಿಂದ ಮನನೊಂದ ಇಬ್ಬರೂ ಮಕ್ಕಳು ಫೆಬ್ರವರಿ 1ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಲಗೇಜ್ ಪ್ಯಾಕ್ ಮಾಡಿಕೊಂಡು ಮನೆ ಬಿಟ್ಟು ತೆರಳಿದ್ದಾರೆ. ಬಾಲಕಿ ತನ್ನ ಆಧಾರ್ ಕಾರ್ಡ್ ಕೊಂಡೊಯ್ದಿದ್ದರಿಂದ ಬಸ್ ಪ್ರಯಾಣ ಉಚಿತವಾಗಿದೆ. ಇತ್ತ ಸಹೋದರನಿಗೆ ಟಿಕೆಟ್ ಪಡೆಯದೇ ಇಬ್ಬರೂ ಸಹ ಶಿವಮೊಗ್ಗಕ್ಕೆ ತೆರಳಿ ಅಲ್ಲಿಂದ ಚಿತ್ರದುರ್ಗದ ಕಡೆ ಬಂದಿದ್ದಾರೆ.
ಇತ್ತ ಮಕ್ಕಳು ಕಾಣೆಯಾದ ಬಗ್ಗೆ ಪೋಷಕರು ಹೆಚ್ಎಎಲ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಗಳನ್ನು ಗಮನಿಸಿ ತಕ್ಷಣ ಅಲರ್ಟ್ ಆಗಿದ್ದ ಹೆಚ್ಎಎಲ್ ಪೊಲೀಸರು ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು.
ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಮಕ್ಕಳ ಮಾಹಿತಿ ಹಂಚಿಕೊಂಡಿದ್ದರು. ಮಕ್ಕಳ ಫೋಟೋ ಗಮನಿಸಿದ್ದ ಸಾರ್ವಜನಿಕರೊಬ್ಬರು ಚಿತ್ರದುರ್ಗದಿಂದ ಮಾಹಿತಿ ನೀಡಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಲ್ಲಿಗೆ ತೆರಳಿ ಮಕ್ಕಳಿಬ್ಬರನ್ನೂ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.

