ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಚಿನ್ನಾಭರಣಕ್ಕಾಗಿ ವೃದ್ಧೆ ಕೊಲೆ ಮಾಡಿ ದೋಚಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಉಸಿರುಗಟ್ಟಿಸಿ ವೃದ್ದೆಯ ಕೊಲೆ ಮಾಡಿ ಆಕೆಯ ಮೈಮೇಲಿದ್ದ 73 ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಡೆದಿದೆ.
ಕೊಲ್ಲಾರಿ ಕಮಲಮ್ಮ(64) ಕೊಲೆಯಾದ ವೃದ್ಧೆ. ತಾಲೂಕಿನ ಆರುಂಡಿ ಗ್ರಾಮದ ನಿವಾಸಿ ಕಮಲಮ್ಮ, ರಾತ್ರಿ ಮನೆಯಲ್ಲಿ ಮಲಗಿದ್ದಾಗ ತಲೆದಿಂಬದಿಂದ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಒಂದು ಜೊತೆ ಕಿವಿ ಓಲೆ, ಎರಡು ಬಂಗಾರದ ಬಳೆ, ಉಂಗುರ ಸೇರಿದಂತೆ ವೃದ್ಧೆಗೆ ಸೇರಿದ ಸುಮಾರು 73 ಗ್ರಾಂ ಚಿನ್ನದ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಕಮಲಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದುದನ್ನು ಗಮನಿಸಿ ಈ ಕೃತ್ಯ ಎಸಗಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಇಡೀ ಗ್ರಾಮದ ಜನರಲ್ಲಿ ಆತಂಕ ಉಂಟು ಮಾಡಿದೆ. ದುಷ್ಕರ್ಮಿಗಳು ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹಾಗಾಗಿ ಗಸ್ತು ಹೆಚ್ಚಳ ಮಾಡುವಂತೆ ಸಾರ್ವಜನಿಕರು ಪೊಲೀಸಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

