ಚಂದ್ರವಳ್ಳಿ ನ್ಯೂಸ್, ಮಧುಗಿರಿ:
ಲಂಚ ಕೊಡಲು ಹಣವಿಲ್ಲದ ರೈತರೊಬ್ಬರು ತಾನು ಬೆಳೆದ ಮೂಲಂಗಿ ಕಟ್ಟುಗಳೊಂದಿಗೆ ಕಚೇರಿಗೆ ಆಗಮಿಸಿ ತಮ್ಮ ಜಮೀನಿಗೆ ದಾರಿ ಮಾಡಿಕೊಡಲು ಸತಾಯಿಸಿದ ಅಧಿಕಾರಿಗಳ ವಿರುದ್ಧ ವಿನೂತೂನ ಪ್ರತಿಭಟನೆ ಮಾಡಿದ ಘಟನೆ ಜರುಗಿದೆ.
ನನ್ನ ಬಳಿ ಅಧಿಕಾರಿಗಳಿಗೆ ಕೊಡಲು ಹಣ ಇಲ್ಲವೆಂದು ತಾವು ಬೆಳೆದ ಮೂಲಂಗಿಯನ್ನೇ ಅಧಿಕಾರಿಗಳಿಗೆ ಕೊಡಲು ರೈತರೊಬ್ಬರು ಮಧುಗಿರಿ ತಾಲೂಕು ಕಚೇರಿಗೆ ಬಂದು ರಾಜ್ಯಗ ಗಮನ ಸೆಳೆಯುವಂತೆ ಮಾಡಿದ್ದಾರೆ.
ರೈತ ಪ್ರಸನ್ನ ಕುಮಾರ್ ಎಂಬುವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಕಚೇರಿ ಎದುರು ತಮ್ಮ ದ್ವಿಚಕ್ರ ವಾಹನದಲ್ಲಿ ಮೂಲಂಗಿ ತರಕಾರಿ ತರುವ ಮೂಲಕ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ರೈತನ ಆರೋಪವೇನು? ನಕಾಶೆಯಲ್ಲಿ ನನ್ನ ಜಮೀನಿಗೆ ಹೋಗಲು ರಸ್ತೆ ಇದೆ. ಆದರೆ ಆ ರಸ್ತೆ ಒತ್ತುವರಿಯಾಗಿದೆ. ಆದ್ದರಿಂದ ಜಮೀನಿಗೆ ತೆರಳಲು ಹೊಸ ದಾರಿಯನ್ನೂ ಮಾಡಿಕೊಡುವಂತೆ ಅಥವಾ ಒತ್ತುವರಿ ದಾರಿಯನ್ನು ತೆರವು ಮಾಡುವಂತೆ ಮನವಿ ಮಾಡಿದ್ದೆ.
ತಹಶೀಲ್ದಾರ್ ಅವರು ಸ್ಥಳೀಯ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದರೂ ಯಾವುದೇ ಕೆಲಸ ಆಗಿಲ್ಲ. ಅಷ್ಟೇ ಅಲ್ಲ, ಎರಡು ತಿಂಗಳ ಹಿಂದೆ ಲೋಕಾಯುಕ್ತರು ಆಗಮಿಸಿ, ತಿಂಗಳೊಳಗೆ ದಾರಿ ಮಾಡಿಕೊಡುವಂತೆ ಸೂಚಿಸಿದ್ದರು.
ಆದರೂ ಈವರೆಗೆ ಯಾರೂ ಬಂದಿಲ್ಲ. ಸ್ಥಳೀಯ ಅಧಿಕಾರಿಗಳು ದಿನ ಒಂದೊಂದು ಕಥೆ ಹೇಳಿ ಕೆಲಸ ಮಾಡುತ್ತಿಲ್ಲ.
ಅದಕ್ಕಾಗಿ ಅಧಿಕಾರಿಗಳಿಗೆ ದುಡ್ಡು ಕೊಡಲು ನನ್ನ ಬಳಿ ಹಣ ಇಲ್ಲ. ನಾನು ತರಕಾರಿ ಮಾರಿ ಬದುಕುತ್ತಿದ್ದೇನೆ. ಆದ್ದರಿಂದ ಅಧಿಕಾರಿಗಳಿಗೆ ನಾನು ಬೆಳೆದ ಮೂಲಂಗಿ ಕೊಡಲು ಆಗಮಿಸಿದ್ದೇನೆ ಎಂದು ರೈತ ಪ್ರಸನ್ನಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಏನಾದರೂ ಮಾಡಿ ನನಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ನ್ಯಾಯಕ್ಕಾಗಿ ಮೈಕ್ನಲ್ಲೇ ಒತ್ತಾಯಿಸಿದ ರೈತ: ತನ್ನ ಸಮಸ್ಯೆಗೆ ಇನ್ನಾದರೂ ಸ್ಪಂದಿಸಿ ಅಂತ ನೊಂದ ರೈತ ಮೈಕ್ನಲ್ಲೇ ಅಧಿಕಾರಿಗಳಿಗೆ ತನ್ನ ಧ್ವನಿ ತಲುಪುವಂತೆ ಘೋಷಣೆ ಕೂಗಿದರು.
ಏನಿದು ಪ್ರಕರಣ:
ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಅವರು ಸರ್ವೆ ನಂಬರ್ 8/1 ಜಮೀನಿನಲ್ಲಿ ತರಕಾರಿ ಸೇರಿದಂತೆ ವಿವಿಧ ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ.
ಸರ್ಕಾರದ ನಕಾಶೆಯಲ್ಲೇ ಇವರ ಜಮೀನಿಗೆ ರಸ್ತೆ ಇದೆ. ಆದರೆ ಆ ರಸ್ತೆ ಈಗ ಒತ್ತುವರಿಯಾಗಿದೆ. ಆದ್ದರಿಂದ ತಮ್ಮ ಜಮೀನಿಗೆ ಹೊಸ ದಾರಿ ಮಾಡಿಕೊಡುವಂತೆ ಅಥವಾ ಒತ್ತುವರಿಯನ್ನು ತೆರವು ಮಾಡಿಕೊಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಈವರೆಗೆ ನ್ಯಾಯ ಸಿಕ್ಕಿಲ್ಲ ಎಂದು ರೈತ ದೂರಿದ್ದಾರೆ.

