ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬೆಳಗಾವಿಯ ಬಾಲಭವನ ವತಿಯಿಂದ ನಿರ್ಮಿಸಲಾದ ನೂತನ ಬಾಕ್ಸ್ ಕ್ರಿಕೆಟ್ ಮೈದಾನದ ಉದ್ಘಾಟನೆಯನ್ನ ಶುಕ್ರವಾರ ಸಚಿವರಿಬ್ಬರು ನೆರವೇರಿಸಿದರು. ಕ್ರಿಕೆಟ್ ಮೈದಾನದ ಉದ್ಘಾಟನೆಯ ಅಂಗವಾಗಿ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್ಗೆ ಇಳಿದರು. ಇದೇ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಡಿದ ಬೌಲಿಂಗ್ಗೆ ಸತೀಶ್ ಜಾರಕಿಹೊಳಿ ‘ಕ್ಲೀನ್ ಬೋಲ್ಡ್’ ಆಗಿದ್ದಾರೆ. ಇದನ್ನು ಕಂಡ ನೆರೆದಿದ್ದ ಕಾರ್ಯಕರ್ತರು ಮತ್ತು ಜನರು ಶಿಳ್ಳೆ, ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ರಾಜಕೀಯದ ಕಡು ವೈರಿಗಳು, ರಾಜಕೀಯದ ಜಂಜಾಟ, ಅಧಿಕಾರದ ಒತ್ತಡಗಳನ್ನು ಬದಿಗಿಟ್ಟು ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಕ್ರಿಕೆಟ್ ಆಟವಾಡಿ ಗಮನ ಸೆಳೆದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ‘ಬಾಕ್ಸ್ ಕ್ರಿಕೆಟ್’ ನೆರೆದಿದ್ದ ಜನರಿಗೆ ಭರಪೂರ ಮನರಂಜನೆ ನೀಡಿದೆ.

