ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸುವ ಸಲುವಾಗಿ ನಗರ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ಖಾಲಿ ಇರುವ 10 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ಜಿಲ್ಲಾ ಯೋಜನಾ ಸಮಿತಿ ಚುನಾವಣೆ-2026 ರ ಚುನಾವಣಾಧಿಕಾರಿ ಹಾಗೂ ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ ಅವರು ಚುನಾವಣೆ ಅಧಿಸೂಚನೆ ಹೊರಡಿಸಿದ್ದಾರೆ.
ಅಧಿಸೂಚನೆಯಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ನಿಯಮಗಳು, 1996 ರ ನಿಯಮ 8 ರ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ದೊಡ್ಡಬಳ್ಳಾಪುರ ನಗರಸಭೆ, ನೆಲಮಂಗಲ ನರಸಭೆ, ವಿಜಯಪುರ ಪುರಸಭೆ ಮತ್ತು ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯಿಂದ ಖಾಲಿ ಇರುವ 10 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಾಗುತ್ತಿದೆ.
ಅಂದರಂತೆ ನಗರ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಸದಸ್ಯರು ದಿನಾಂಕ:07.02.2026 ರಿಂದ 17.02.2026 ರವರೆಗಿನ ಯಾವುದೇ ದಿನದಂದು (ಸಾರ್ವತ್ರಿಕ ರಜಾ ದಿನವನ್ನು ಹೊರತುಪಡಿಸಿ) ಕಛೇರಿ ಸಮಯದಲ್ಲಿ ಬೆಳಿಗ್ಗೆ 11.00 ರಿಂದ ಅಪರಾಹ್ನ 2.00 ರವರೆಗೆ ಚುನಾವಣೆಯ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರದ ಪತ್ರಗಳನ್ನು ಪಡೆಯಬಹುದು.
ನಾಮಪತ್ರಗಳನ್ನು ಅಭ್ಯರ್ಥಿ ಅಥವಾ ಅವರ ಸೂಚಕರು ದಿನಾಂಕ:17.02.2026 ರಂದು ಮೀರದಂತೆ ಯಾವುದೇ ದಿನಾಂಕದಂದು (ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 11.00 ಗಂಟೆಯಿಂದ ಅಪರಾಹ್ನ 02.00 ಗಂಟೆಯ ನಡುವೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.
ನಾಮಪತ್ರಗಳನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳ ಕಛೇರಿ ದಿನಾಂಕ: 18.02.2026 ರಂದು ಪೂರ್ವಾಹ್ನ 11.00 ಗಂಟೆಗೆ ಪರಿಶೀಲನೆ ಮಾಡುವುದು.
ಅಭ್ಯರ್ಥಿ ಅಥವಾ ಅವರ ಸೂಚಕರ ಮೂಲಕ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟೀಸನ್ನು 19.02.2026 ರಿಂದ 21.02.2026(ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ಬೆಳಗ್ಗೆ 11.00 ಗಂಟೆಯಿಂದ ಅಪರಾಹ್ನ 02.00 ಗಂಟೆಗೆ ಮುಂಚೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು.
ಚುನಾವಣೆಗೆ ಸ್ಪರ್ಧೆ ಇರುವ ಸಂದರ್ಭದಲ್ಲಿ ಮತದಾನವನ್ನು ದಿನಾಂಕ:27.02.2026ರಂದು ಬೆಳಿಗ್ಗೆ 09.00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಗುವುದು.
ದಿನಾಂಕ 27.02.2026 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಪರಾಹ್ನ 03 ಗಂಟೆಗೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು, ಚುನಾವಣೆ ಪ್ರಕ್ರಿಯೆಯು ದಿನಾಂಕ: 28.02.2026 ರಂದು ಮುಕ್ತಾಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

