ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನಪದ ಅಂದರೆ ಜನಪರ ಎಂದು ನಂಬಿರುವವನು ನಾನು. ಜಾನಪದ ಕಲೆಗಳು ಕೇವಲ ಮನೋರಂಜನೆಯ ಮಾಧ್ಯಮವಲ್ಲ; ಅವು ನಮ್ಮ ಮಣ್ಣಿನ ಗುಣ, ಇತಿಹಾಸ ಮತ್ತು ಬದುಕಿನ ಕ್ರಮವನ್ನು ಪ್ರತಿಬಿಂಬಿಸುವ ಕನ್ನಡಿಗಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.
ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಲೋಕದಲ್ಲಿ ಆಯೋಜಿಸಿದ್ದ “ವಿದ್ಯಾರ್ಥಿ ಜನಪದ ಲೋಕೋತ್ಸವ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಜನಪದದಲ್ಲಿ ಜನ ವಿರೋಧಿಯಾದದ್ದು, ಸಮಾಜ ವಿರೋಧಿಯಾದದ್ದು ಏನೂ ಇಲ್ಲ ಆದ್ದರಿಂದಲೇ ಜನಪದ ಎಂದರೆ ಜನಪರ ಎನ್ನುತ್ತೇನೆ ಎಂದು ತಿಳಿಸಿದರು.
ಇಂದು ಜಾನಪದ ಪರಿಷತ್, “ವಿದ್ಯಾರ್ಥಿ ಜಾನಪದ ಲೋಕೋತ್ಸವ” ಹಮ್ಮಿಕೊಂಡಿರುವುದು ವಿಶೇಷ. ಇಲ್ಲಿಯವರೆಗೂ ಜಾನಪದ ಅಂದ ಕೂಡಲೇ ಹಿರಿಯ ಕಲಾ ತಂಡಗಳು ಮತ್ತು ವಿಶ್ವ ವಿದ್ಯಾಲಯದ ವಿದ್ವಾಂಸರು ಮತ್ತು ಪಿಹೆಚ್ ಡಿ ವಿದ್ಯಾರ್ಥಿಗಳ ನಡುವೆ ಮಾತ್ರ ಒಂದಷ್ಟು ಚಟುವಟಿಕೆಗಳು ನಡೆಯುತ್ತಿದ್ದವು.
ಈ ಬಾರಿ ವಿದ್ಯಾರ್ಥಿಗಳಿಗಾಗಿಯೇ, ವಿದ್ಯಾರ್ಥಿಗಳಿಂದಲೇ ನಡೆಯುವ ಜಾನಪದ ಲೋಕೋತ್ಸವ ಹಮ್ಮಿಕೊಂಡಿರುವುದು ಹಲವಾರು ಕಾರಣಗಳಿಂದ ಮಹತ್ವದ್ದಾಗಿದೆ ಎಂದರು.
ನಮ್ಮ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಮುಂದಿನ ತಲೆ ಮಾರುಗಳಿಗೆ ದಾಟಿಸುವ ಮೂಲಕ ಈ ನೆಲದ ಸಂಸ್ಕøತಿಯನ್ನು ಗಟ್ಟಿಗೊಳಿಸುವ ಕೆಲಸ ವಿದ್ಯಾರ್ಥಿಗಳಿಂದಲೇ ಆಗಬೇಕಿದೆ. ಈ ನಿಟ್ಟಿನಲ್ಲಿ ಈ ಲೋಕೋತ್ಸವ ಮಹತ್ವದ್ದು ಎಂದರು.
ಹೈಟೆಕ್ ಕಾನ್ವೆಂಟ್ ಗಳೂ ಶಾಲಾ ವಾರ್ಷಿಕೋತ್ಸವದ ದಿನಗಳಲ್ಲಿ ಪಾಶ್ಚಿಮಾತ್ಯ ಹಾಡು-ಕುಣಿತದ ಜೊತೆಗೆ ಈ ಮಣ್ಣಿನ ಜಾನಪದ ಹಾಡು-ನೃತ್ಯಗಳು ಸೇರಿದಂತೆ ಇತರೆ ಕಲಾ ಪ್ರಕಾರಗಳ ಪ್ರದರ್ಶನದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತಿದೆ. ಇದು ಜಾನಪದ ಕಲೆಗಳ ಶಕ್ತಿ ಮತ್ತು ಸತ್ವ. ಆಧುನಿಕ ತಂತ್ರಜ್ಞಾನ ಎಷ್ಟೇ ಬೆಳೆದರೂ, ಈ ಆಧುನಿಕ ತಂತ್ರಜ್ಞಾನದ ಮೂಲಕ ಪಾಶ್ಚಿಮಾತ್ಯ ಮಾತ್ರವಲ್ಲದೆ ಇತರೆ ಸಾಂಸ್ಕøತಿಕ ದಾಳಿಗಳು ನಡೆದರೂ ನಮ್ಮ ಜಾನಪದ ಕಲೆಗಳನ್ನು ಅಳಿಸಲು ಸಾಧ್ಯವಾಗಿಲ್ಲ ಎಂದರು.
ಹಳ್ಳಿಗಳ ಸೊಗಡು, ಶ್ರಮಜೀವಿಗಳ ನೋವು-ನಲಿವು ಈ ಕಲೆಗಳಲ್ಲಿ ಹಾಸುಹೊಕ್ಕಾಗಿವೆ. ಸಾಂಸ್ಕøತಿಕ ಬೇರುಗಳ ರಕ್ಷಣೆಗೆ ಜಾನಪದ ಕಲೆಗಳು ಗಟ್ಟಿ ಅಡಿಪಾಯಗಳು. ನಮ್ಮ ಪೂರ್ವಜರ ಆಚಾರ-ವಿಚಾರಗಳು, ನಂಬಿಕೆಗಳು ಮತ್ತು ಜೀವನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಜಾನಪದ ಕಲೆಗಳು ಮಾಡುತ್ತವೆ. ಯಕ್ಷಗಾನ, ದೊಡ್ಡಾಟ ಅಥವಾ ಬಯಲಾಟಗಳು ಪುರಾಣ ಪುಣ್ಯಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತವೆ ಎಂದು ವಿವರಿಸಿದರು.
ಸಾಮಾಜಿಕ ಐಕ್ಯತೆಯಲ್ಲೂ, ಶ್ರಮಿಕ ಜನಸಮುದಾಯಗಳನ್ನು ಜಾತಿ-ಮತದ ಭೇದವಿಲ್ಲದೆ ಒಂದುಗೂಡಿಸುತ್ತವೆ. ಊರಿನ ಹಬ್ಬಗಳು, ಜಾತ್ರೆಗಳಲ್ಲಿ ನಡೆಯುವ ಡೊಳ್ಳು ಕುಣಿತ, ವೀರಗಾಸೆ ಅಥವಾ ಕೋಲಾಟಗಳು ಸಾಮೂಹಿಕ ಶಕ್ತಿಯನ್ನು ಮತ್ತು ಸೌಹಾರ್ದತೆಯನ್ನು ಎತ್ತಿ ಹಿಡಿಯುತ್ತವೆ. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ದಣಿವು ನೀಗಿಸಿಕೊಳ್ಳಲು ರೈತರು ಹಾಡುವ ಬೀಸುವ ಪದಗಳು, ನೆಟ್ಟಿಯ ಹಾಡುಗಳು ಕೇವಲ ಗೀತೆಗಳಲ್ಲ. ಅವು ಶ್ರಮಜೀವಿಗಳ ಉಸಿರು. ಇವು ಮನುಷ್ಯನ ಮನಸ್ಸಿಗೆ ಮುದ ನೀಡಿ ಬದುಕುವ ಉತ್ಸಾಹ ತುಂಬುತ್ತವೆ ಎಂದರು.
ಕಲೆ ಮತ್ತು ಕರಕುಶಲತೆಗೆ ತಕ್ಕಂತೆ ಕನ್ನಡ ನಾಡಿನ ಪ್ರತಿಯೊಂದು ಪ್ರಾಂತ್ಯಕ್ಕೂ ತನ್ನದೇ ಆದ ವಿಶಿಷ್ಟ ಮತ್ತು ವೈವಿದ್ಯವಾದ ಕಲೆಗಳಿವೆ. ಕರಾವಳಿಗೆ ಹೋದರೆ ಯಕ್ಷಗಾನ, ಭೂತ ಕೋಲ. ಉತ್ತರ ಕರ್ನಾಟಕದ್ದೇ ಆದ ವಿಶಿಷ್ಠ ಶೈಲಿಯ ಲಾವಣಿ, ಗೀಗೀ ಪದ, ದೊಡ್ಡಾಟಗಳು ರೋಮಾಂಚನಗೊಳಿಸುತ್ತವೆ. ಹಳೇ ಮೈಸೂರು ಭಾಗದಲ್ಲಿನ ಪೂಜಾ ಕುಣಿತ, ಗೊರವನ ಕುಣಿತ, ಕಂಸಾಳೆ ಎಲ್ಲಾ ನೋಡಿದರೆ ಈ ವೈವಿಧ್ಯತೆಯು ಕರ್ನಾಟಕದ ಸಾಂಸ್ಕøತಿಕ ನಕ್ಷೆಯನ್ನು ಶ್ರೀಮಂತಗೊಳಿಸಿರುವುದು ಗೊತ್ತಾಗುತ್ತದೆ. ಭಾಷೆಯ ಶ್ರೀಮಂತಿಕೆ ಜಾನಪದ ಸಾಹಿತ್ಯವು ಲಿಖಿತ ರೂಪದಲ್ಲಿಲ್ಲದಿದ್ದರೂ, ಮೌಖಿಕ ಪರಂಪರೆಯ ಮೂಲಕ ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಂಡು ಬಂದಿದೆ ಎಂದು ವಿವರಿಸಿದರು.
ಗಾದೆ ಮಾತುಗಳು, ಒಗಟುಗಳಲ್ಲಿರುವ ಭಾಷಾ ಪ್ರೌಢಿಮೆ ಅದ್ಭುತವಾದದ್ದು. ಜಾನಪದ ಎನ್ನುವುದು ಹರಿಯುವ ನದಿಯಂತೆ; ಅದು ಕಾಲಕ್ಕೆ ತಕ್ಕಂತೆ ಬದಲಾದರೂ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುವುದಿಲ್ಲ. ನಮ್ಮ ನಾಡಿನ ಈ ಅಪ್ಪಟ ದೇಶಿ ಸೊಗಡನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಜ್ಞಾವಂತ ಜವಾಬ್ದಾರಿ ಆಗಿದೆ. ಈ ಜವಾಬ್ದಾರಿಯನ್ನು ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ, ಪ್ರತೀ ಕಲಾ ತಂಡಗಳೂ ಹೆಮ್ಮೆಯಿಂದ ನಿಭಾಯಿಸುತ್ತಾರೆ ಎನ್ನುವ ಭರವಸೆಯೊಂದಿಗೆ ನನಗಿದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಪಠ್ಯಕ್ರಮ ಕಲಿಸಿದರೆ, ಜೀವನಪಾಠ ಕಲಿಸುವುದು ಜನಪದ ಸಾಹಿತ್ಯ. ಜಾನಪದ ಹುಟ್ಟಿದ್ದು ಯಾವ ಜರ್ಮನ್ ಯೂನಿವರ್ಸಿಟ್ ಯಿಂದಾಗಲೀ, ಯಾವುದೇ ವಿಶ್ವ ವಿದ್ಯಾಲಯ ದಿಂದಾಗಲಿ ಅಲ್ಲ. ಇದರ ಜನನ ನಮ್ಮ ನಿಮ್ಮ ಪೂರ್ವಜರಿಂದ ಎಂದು ವಿವರಿಸಿದರು.
ಸಮಾರಂಭದಲ್ಲಿ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ, ಆದಿಚುಂಚನಗಿರಿ ಶಾಖಾ ಮಠದ ಶ್ರೀಗಳಾದ ಅನ್ನದಾನೇಶ್ವರ ಸ್ವಾಮೀಜಿ, ಮಾಜಿ ಶಾಸಕರಾದ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಕೆ.ರಾಜು, ಜಾನಪದ ಪರಿಷತ್ ನ ಆದಿತ್ಯ ನಂಜರಾಜು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

