ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕೃತ ದರ ನಿಗದಿ ಸಮಿತಿ ವರದಿಯ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಮತ್ತು ಸಾರ್ವಜನಿಕರ ಮೇಲಿನ ದಬ್ಬಾಳಿಕೆ ಬಯಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹರಿಹಾಯ್ದಿದಿದ್ದಾರೆ.
ಎಫ್‌ಎಫ್‌ಸಿ ಸಭೆಗಳಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳು (ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆ), ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಇನ್ನು ಮುಂದೆ ಮೆಟ್ರೋಗೆ ಸಬ್ಸಿಡಿ ನೀಡಲು ಸಾಧ್ಯವಿಲ್ಲ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ತಾವು ನೀಡುತ್ತಿದ್ದ ಆರ್ಥಿಕ ನೆರವನ್ನು ಹಿಂಪಡೆದಿರುವ ಸರ್ಕಾರ, ಆ ಹೊರೆಯನ್ನು ಜನರ ಮೇಲೆ ಹಾಕಲು ಪ್ರತಿ ವರ್ಷ ಮೆಟ್ರೋ ದರ ಏರಿಕೆ ಮಾಡುವಂತೆ ಪಟ್ಟು ಹಿಡಿದಿರುವುದು ವರದಿಯಲ್ಲಿ ಸಾಕ್ಷ್ಯ ಸಮೇತ ದಾಖಲಾಗಿದೆ ಎಂದು ನಿಖಿಲ್ ಕಿಡಿಕಾರಿದ್ದಾರೆ.
ವರದಿಯಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ:
1. ರಾಜ್ಯ ಸರ್ಕಾರದ ಆರ್ಥಿಕ ಅಸಮರ್ಥತೆಯ ಒಪ್ಪಿಗೆ
ನೆರವು ಸ್ಥಗಿತ (ಸೆಕ್ಷನ್ 3.2.3 ಮತ್ತು 3.2.4): ಬಿಎಂಆರ್‌ಸಿಎಲ್‌ಸಾಲ ಮರುಪಾವತಿ ಮತ್ತು ನಷ್ಟ ಭರಿಸಲು ಈವರೆಗೆ ಸರ್ಕಾರ ನೀಡುತ್ತಿದ್ದ ‘ಶ್ಯಾಡೋ ಕ್ಯಾಶ್ ಸಪೋರ್ಟ್‘ ಅನ್ನು ನಿಲ್ಲಿಸುವುದಾಗಿ ಸರ್ಕಾರ ಹೇಳಿದೆ.
ವರದಿಯ ಪ್ರಕಾರ: “ರಾಜ್ಯ ಸರ್ಕಾರದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇನ್ನು ಮುಂದೆ SCS ನೀಡಲು ಸಾಧ್ಯವಾಗದೇ ಇರಬಹುದು.”
ಜನರ ಮೇಲೆ ಹೊರೆ:
ಸರ್ಕಾರದ ಈ ದಿವಾಳಿತನದಿಂದಾಗಿ, ಮೆಟ್ರೋದ ಎಲ್ಲಾ ಸಾಲ ಮತ್ತು ವೆಚ್ಚಗಳನ್ನು ಪ್ರಯಾಣಿಕರ ಟಿಕೆಟ್ ದರದ ಮೂಲಕವೇ ವಸೂಲಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
- ದರ ಏರಿಕೆಗಾಗಿ ಸರ್ಕಾರದ ಒತ್ತಡ-
ತುರ್ತು ಏರಿಕೆಗೆ ಪಟ್ಟು (ಸೆಕ್ಷನ್ 4.8 ಮತ್ತು 7.8): ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸರ್ಕಾರದ ಮೇಲಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮೆಟ್ರೋ ದರ ಏರಿಕೆ ಮಾಡುವುದು “ಅತ್ಯಗತ್ಯ” ಎಂದು ಎಫ್‌ಎಫ್‌ಸಿಗೆ ತಿಳಿಸಿದ್ದಾರೆ.
ನಿರಂತರ ಪತ್ರ ವ್ಯವಹಾರ: ದರ ಏರಿಕೆ ಸಮಿತಿಯನ್ನು ಆದಷ್ಟು ಬೇಗ ರಚಿಸುವಂತೆ ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್‌ಗೆ ನಿರಂತರವಾಗಿ ಪತ್ರಗಳನ್ನು ಬರೆಯುವ ಮೂಲಕ ಒತ್ತಡ ಹೇರಿರುವುದು ಬಯಲಾಗಿದೆ. - ವಾರ್ಷಿಕ ಸ್ವಯಂಚಾಲಿತ ದರ ಏರಿಕೆ ಸೂತ್ರ-
ಪ್ರತಿ ವರ್ಷ ಬೆಲೆ ಏರಿಕೆ (ಸೆಕ್ಷನ್ 9.5): ಸರ್ಕಾರಿ ಅಧಿಕಾರಿಗಳು ಕೇವಲ ಒಂದು ಬಾರಿಯ ಏರಿಕೆಗೆ ಸೀಮಿತವಾಗದೆ. “ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರ” ಜಾರಿಗೆ ತರಲು ಸೂಚಿಸಿದ್ದಾರೆ. ಇದರ ಅನ್ವಯ ಫೆಬ್ರವರಿ 9, 2026 ರಿಂದ ಪ್ರತಿ ವರ್ಷ ದರ ಏರಿಕೆಯಾಗಲಿದೆ. ಇದರ ಅನ್ವಯ ಫೆಬ್ರವರಿ 9, 2026 ರಿಂದ ಪ್ರತಿ ವರ್ಷ ದರ ಏರಿಕೆಯಾಗಲಿದೆ ಎಂದು ನಿಖಿಲ್ ಹರಿಹಾಯ್ದಿದ್ದಾರೆ.
ಕಾಯ್ದೆಯ ದುರ್ಬಳಕೆ:
ಮೆಟ್ರೋ ರೈಲ್ವೇ ಕಾಯ್ದೆಯಡಿ ಈ ಶಿಫಾರಸುಗಳು “ಕಡ್ಡಾಯ” ಎಂಬ ಅಂಶವನ್ನು ಬಳಸಿಕೊಂಡು ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ.
- ಸಾರ್ವಜನಿಕರ ವಿರೋಧಕ್ಕೆ ಬೆಲೆಯಿಲ್ಲ-
ಜನರ ಅಭಿಪ್ರಾಯಕ್ಕೆ ಕಡೆಗಣನೆ (ಸೆಕ್ಷನ್ 4.4): ವರದಿಯ ಪ್ರಕಾರ, ಅಭಿಪ್ರಾಯ ನೀಡಿದವರಲ್ಲಿ ಶೇ. 51 ರಷ್ಟು ಪ್ರಯಾಣಿಕರು ದರ ಏರಿಕೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಆದರೂ ಜನರ ಹಿತಾಸಕ್ತಿಗಿಂತ ಸರ್ಕಾರದ ಖಜಾನೆ ತುಂಬಿಸುವುದಕ್ಕೇ ಆದ್ಯತೆ ನೀಡಲಾಗಿದೆ. - ಆರ್ಥಿಕ ದುರ್ಬಳಕೆಯ ಅನಾವರಣ-
ಸಾಲದ ಸುಳಿ: ಬಿಎಂಆರ್‌ಸಿಎಲ್‌ಸುಮಾರು 13,106 ಕೋಟಿ ಸಾಲ ಹೊಂದಿದ್ದು, ಮುಂದಿನ 5 ವರ್ಷಗಳಲ್ಲಿ ಸಾವಿರಾರು ಕೋಟಿ ಮರುಪಾವತಿ ಮಾಡಬೇಕಿದೆ. ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳು ಮತ್ತು ಇತರೆ ವೆಚ್ಚಗಳಿಂದಾಗಿ ದಿವಾಳಿಯಾಗಿದ್ದು, ಮೆಟ್ರೋ ಪ್ರಯಾಣಿಕರನ್ನು ಎಟಿಎಂನಂತೆ ಬಳಸಿಕೊಳ್ಳುತ್ತಿದೆ ಎಂದು ನಿಖಿಲ್ ಅವರು ಆರೋಪಿಸಿದ್ದಾರೆ.

