ಚಂದ್ರವಳ್ಳಿ ನ್ಯೂಸ್, ಹೊನ್ನಾಳಿ:
ಮುಖ್ಯಮಂತ್ರಿಗಳ ಬದಲಾವಣೆ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ. ಅವರ ಹೇಳಿಕೆ ಹೊರತಾಗಿ ಯಾರೇ ಹೇಳಿದರೂ ಅದು ಅಭಿಪ್ರಾಯವಷ್ಟೇ. ಅದೇ ರೀತಿ ಯತೀಂದ್ರ ಅವರ ಹೇಳಿಕೆ ಕೂಡ ಅವರ ವೈಯಕ್ತಿಕವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೆಚ್ ಗೋಪಗೊಂಡನಹಳ್ಳಿಯಲ್ಲಿ ಗ್ರಾಮ ಸೌಧ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಶಾಸಕ ಇಕ್ಬಾಲ್ ಹುಸೇನ್ ಆಗಲಿ ಶಾಸಕ ಬಸವರಾಜ್ ಶಿವಗಂಗಾ ಆಗಲಿ ಅವರಾಗಿ ಬಂದು ಈ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪ ಮಾಡಿಲ್ಲ. ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಸಿಎಂ ಕುರ್ಚಿ ವಿಚಾರವಾಗಿ ಮಾಧ್ಯಮದ ಮುಂದೆ ಯಾರೇ ಮಾತನಾಡಿದರೂ ಅದು ಅಪ್ರಸ್ತುತ ಎಂದು ಖರ್ಗೆ ತಿಳಿಸಿದರು.
ಮುಖ್ಯಮಂತ್ರಿಗಳ ಬದಾಲವಣೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಸಾಹೇಬ್ರು ಮತ್ತು ರಾಹುಲ್ ಗಾಂಧಿ ಮಾತು ಅಂತಿಮ. ಈ ಬಗ್ಗೆ ಯಾರೇ ಮಾತಾಡಿದ್ರು ಅದಕ್ಕೆ ಮಾನ್ಯತೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

