ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಚಲನಚಿತ್ರ ಕಾರ್ಮಿಕರು, ಕಲಾವಿದರು ಹಾಗೂ ತಂತ್ರಜ್ಞರ ಒಕ್ಕೂಟ ಸ್ಥಾಪನೆಯಾಗಿ 40 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಇಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ಒಕ್ಕೂಟದ ಆವರಣದಲ್ಲಿ 40ನೇ ವರ್ಷದ ಸಮಾವೇಶವನ್ನು ವರ್ಣರಂಜಿತವಾಗಿ ಹಮ್ಮಿಕೊಳ್ಳಲಾಗಿದ್ದು ಯಶಸ್ವಿಯಾಗಿ ನೆರವೇರಿತು.
ಚಲನಚಿತ್ರ ಕ್ಷೇತ್ರದ ಒಟ್ಟು 19 ಸಂಘಗಳು ಒಕ್ಕೂಟದ ಸದಸ್ಯತ್ವ ಹೊಂದಿದ್ದು, ಈ ಎಲ್ಲಾ ಸದಸ್ಯರ ಅಭಿವೃದ್ಧಿ, ಕಲ್ಯಾಣ ಮತ್ತು ಏಕತೆಗೆ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ.
ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷೆ, ಹಿರಿಯ ಕಲಾವಿದೆ ಹಾಗೂ ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತೆ ಡಾ. ಜಯಮಾಲಾ ಆಗಮಿಸಿ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಗೌರವ ಅಧ್ಯಕ್ಷರು, ಹಿರಿಯ ನಿರ್ದೇಶಕ-ನಿರ್ಮಾಪಕರು ಹಾಗೂ ಕನ್ನಡ ಹೋರಾಟಗಾರರಾದ ಸಾ.ರಾ. ಗೋವಿಂದು ವಹಿಸಿದ್ದರು.

ವೇದಿಕೆಯಲ್ಲಿ ಚಲನಚಿತ್ರ ಕ್ಷೇತ್ರದ ಅನೇಕ ಗಣ್ಯರು ಉಪಸ್ಥಿತರಿದ್ದರು. ನಿರ್ಮಾಪಕರು, ನಿರ್ದೇಶಕರು ಹಾಗೂ ಕಾರ್ಮಿಕ ಪ್ರತಿನಿಧಿಗಳಾದ ರಾಕ್ ಲೈನ್ ವೆಂಕಟೇಶ್, ಉಮೇಶ್ ಬಣಕಾರ್, ಸೋಮಸುಂದರ್ ಮೂರ್ತಿ, ಗೋವಿಂದರಾಜ್, ವಿ. ಗಣೇಶ್, ಆರ್‌ಆರ್‌ಆರ್ ಪ್ರಕಾಶ್, ಮುಸುರಿ ಜಯಸಿಂಹ, ರಾಜ್ಯಸಭಾ ಸದಸ್ಯ ಜಗ್ಗೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಮೂರ್ತಿ, ಒಕ್ಕೂಟದ ಅಧ್ಯಕ್ಷ ಸೋಮಶೇಖರ್, ಎನ್.ಎಂ. ಸುರೇಶ್, ಕಾರ್ಯದರ್ಶಿ ಸೋಮಸುಂದರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಡಾ. ಜಯಮಾಲಾ ಮಾತನಾಡಿ ಒಕ್ಕೂಟಕ್ಕೆ ಇನ್ನೂ ಸ್ವಂತ ಕಟ್ಟಡವಿಲ್ಲದಿರುವುದು ಗಮನಾರ್ಹವಾಗಿದ್ದು, ತಮ್ಮ ಅವಧಿಯಲ್ಲೇ ಸರ್ಕಾರದೊಂದಿಗೆ ಚರ್ಚಿಸಿ ಸ್ವಂತ ಕಟ್ಟಡ ಹಾಗೂ ಸದಸ್ಯರ ಕಲ್ಯಾಣಕ್ಕಾಗಿ ಅಗತ್ಯ ನೆರವು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಮಹಿಳಾ ಕಲಾವಿದರು ಅವರನ್ನು ಗೌರವಿಸಿದರು.
ಜಗ್ಗೇಶ್ ಮಾತನಾಡಿ ಹಿಂದಿನ ದಿನಗಳ ಚಿತ್ರರಂಗದ ಕಷ್ಟಸಾಧ್ಯ ಹಾದಿ ಮತ್ತು ಪ್ರಾಮಾಣಿಕತೆಯನ್ನು ನೆನಪಿಸಿಕೊಂಡರು. ಇಂದಿನ ತಂತ್ರಜ್ಞಾನದಿಂದ ಚಿತ್ರರಂಗದಲ್ಲಿ ಬದಲಾವಣೆಗಳು ಆಗುತ್ತಿವೆ ಎಂದು ಹೇಳಿ, ಸಿನಿಮಾ ಮತ್ತು ಕಲೆಗೆ ಅಂತ್ಯವಿಲ್ಲ, ಆದರೆ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರು ಒಗ್ಗಟ್ಟಿನಿಂದ ಕ್ಷೇತ್ರವನ್ನು ಉಳಿಸಬೇಕು ಎಂದು ಕರೆ ನೀಡಿದರು.
ರಾಕ್ ಲೈನ್ ವೆಂಕಟೇಶ್ ಮಾತನಾಡಿ ಕಾರ್ಮಿಕರು ಚಿತ್ರರಂಗದ ಬೆನ್ನೆಲುಬು ಎಂದರು. ಸರ್ಕಾರ ಇವರ ಕಲ್ಯಾಣಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಸಾ.ರಾ. ಗೋವಿಂದು ಅವರು ಡಾ. ರಾಜ್‌ಕುಮಾರ್ ಅವರು ಚಿತ್ರ ಕಾರ್ಮಿಕರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡು ಉತ್ತಮ ವೇತನ ನೀಡುತ್ತಿದ್ದುದನ್ನು ಸ್ಮರಿಸಿದರು. ಕಾರ್ಮಿಕರು ಅಸಂಘಟಿತರಾಗದೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಚಿತ್ರ ಕಾರ್ಮಿಕರು, ಸಾಧನೆ ಮಾಡಿದ ಕಲಾವಿದರು ಹಾಗೂ ಒಕ್ಕೂಟದ 19 ಸಂಘಟನೆಗಳ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಮಕ್ಕಳಿಂದ ನೃತ್ಯ-ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ರವಿಶಂಕರ್ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು. ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ಕಲಾವಿದರು, ತಂತ್ರಜ್ಞರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

