ಮೆಟ್ರೋ ದರ ಏರಿಕೆ ವಿರುದ್ಧ ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ರಾಜ್ಯ ಸರ್ಕಾರದ ವಿರುದ್ದ ನಮ್ಮ ಮೆಟ್ರೋ ದರ ಏರಿಕೆ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ಕ್ಷೇತ್ರದ ಶಾಸಕ ರಾಮಮೂರ್ತಿ ಪ್ರತಿಭಟನೆಗೆ ಮುಂದಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಟ್ಟು ಕಳುಹಿಸಿದ್ದಾರೆ.

ಮೆಟ್ರೊ ರೈಲು ದರ ಏರಿಕೆ ವಿರೋಧಿಸಿ ತೇಜಸ್ವಿ ಸೂರ್ಯ ಅವರಿಗೆ ಪ್ರತಿಭಟನೆ ಮಾಡದಂತೆ ಪೊಲೀಸರು ನೋಟಿಸ್ ನೀಡಿದ್ದರು. ಆದಾಗ್ಯೂ ಸೋಮವಾರ ಬೆಳಗ್ಗೆ ಆರ್.ವಿ.ರಸ್ತೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು‌. ಖಾಲಿ ಟ್ರಂಕ್ ಹಿಡಿದು ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಸಂಸದರು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿದರು.

- Advertisement - 

ನಾನು ಪ್ರತಿಭಟನೆ ನಡೆಸುತ್ತಿಲ್ಲ‌. ಖಾಲಿ ಟ್ರಂಕ್ ಹಿಡಿದು ನಿಂತಿದ್ದೇನೆ. ನನ್ನನ್ನು ಯಾರೂ ತಡೆಯಬಾರದು ಎಂದು ಹೇಳುತ್ತಿದ್ದಂತೆ ತೇಜಸ್ವಿ ಅವರನ್ನು ತಡೆಯಲು ಪೊಲೀಸರು ಮುಂದಾದಾಗ, ಸಂಸತ್ ಅಧಿವೇಶನ ನಡೆಯುತ್ತಿದೆ.‌ಕಾನೂನು ತಿಳಿದುಕೊಂಡು ವಶಕ್ಕೆ ಪಡೆದುಕೊಳ್ಳುವಂತೆ ಸಂಸದ ತೇಜಸ್ವಿ ಸೂರ್ಯ ಪೊಲೀಸರಿಗೆ ಸೂಚಿಸಿದರು.

ಶಾಸಕ ರಾಮಮೂರ್ತಿ ಮಾತನಾಡಿ, ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಆಗಿದೆ. ದರ ಏರಿಕೆ ಕೂಡಲೇ ಕೈ ಬಿಡಬೇಕು. ಈಗಿರುವ ದರವನ್ನೂ ಕಡಿಮೆ ಮಾಡಬೇಕು. ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೆಟ್ರೊ ನಿಲ್ದಾಣದ ಬಳಿ ಪ್ರತಿಭಟನೆ ಹಿನ್ನೆಲೆಯಲ್ಲಿ
20ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಒಂದು ಕೆಎಸ್​ಆರ್​ಪಿ ವಾಹನ ಇರಿಸಲಾಗಿತ್ತು.

- Advertisement - 

ಸಂಸದ ತೇಜಸ್ವಿ ಸೂರ್ಯ ದರ ಏರಿಕೆಗೆ ಕಿಡಿಕಾರಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನನ್ನನ್ನು ಬಂಧಿಸುವುದರಿಂದ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ಖಾಲಿ ಪೆಟ್ಟಿಗೆಅಸಲಿಯತ್ತು ಮತ್ತು ಸತ್ಯವನ್ನು ಬಯಲಿಗೆಳೆದಿದ್ದಕ್ಕಾಗಿ ನನ್ನನ್ನು ಬಂಧಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಮೆಟ್ರೋ ದರ, ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರು ಇದರ ಬೆಲೆ ತೆರುತ್ತಿದ್ದಾರೆ. ಇನ್ನು ನೆಪಗಳು ನಡೆಯುವುದಿಲ್ಲ. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಶ್ವೇತಪತ್ರಹೊರಡಿಸಬೇಕು, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಹದಿನಾರನೇ ಹಣಕಾಸು ಆಯೋಗದ ಮುಂದೆ ನೀವೇ ಒಪ್ಪಿಕೊಂಡಂತೆ, ರಾಜ್ಯದ ಆರ್ಥಿಕ ಸ್ಥಿತಿ ಏಕೆ ದುರ್ಬಲವಾಗಿದೆ? ಕರ್ನಾಟಕದಲ್ಲಿ ಜೀವನ ನಿರ್ವಹಣೆ ಏಕೆ ಇಷ್ಟೊಂದು ದುಬಾರಿಯಾಗುತ್ತಿದೆ? ರಾಜ್ಯ ಸರ್ಕಾರ ಪ್ರತಿದಿನ ಬೆಲೆಗಳನ್ನು ಏಕೆ ಹೆಚ್ಚಿಸುತ್ತಿದೆ? ಆರ್ಥಿಕತೆಯನ್ನು ಸರಿಪಡಿಸಿ, ಮೆಟ್ರೋಗೆ ನೀಡುತ್ತಿದ್ದ ಆರ್ಥಿಕ ಬೆಂಬಲವನ್ನು ಪುನಃ ಸ್ಥಾಪಿಸಿ, ಆಗ ಮೆಟ್ರೋ ದರಗಳು ತಾನಾಗಿಯೇ ಇಳಿಯುತ್ತವೆ. ಇದನ್ನು ಬಿಟ್ಟು ಬೇರೇನು ಮಾಡಿದರೂ ಅದು ಕೇವಲ ವಂಚನೆಯಷ್ಟೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ.

 

Share This Article
error: Content is protected !!
";