ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೊರೊನಾ ಸಂದರ್ಭದಲ್ಲಿ ಟ್ರಾವೆಲ್ಸ್ ವ್ಯವಹಾರ ನಷ್ಟಗೊಂಡಿದ್ದರಿಂದ ಮಾಸ್ಕ್ ವೇಷ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಡಿ.ರಾಜಾ ಬಂಧಿತ ಆರೋಪಿ. ಈತನಿಂದ 1.84 ಕೋಟಿ ಮೌಲ್ಯದ 1,250 ಕೆಜಿ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸದಾನಂದಗೌಡ ನಗರದ ಎನ್ಜಿಎಫ್ ಬಡಾವಣೆಯ ಮನೆಯೊಂದರಲ್ಲಿ ಕಳೆದ ಅಕ್ಟೋಬರ್ 18ರಂದು ಬೀಗ ಹಾಕಿದ್ದ ಮನೆ ಬಾಗಿಲು ಒಡೆದು 783 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ. ಮಾರನೇ ದಿನ ಬೆಳಗ್ಗೆ ಮನೆ ಕೆಲಸದಾಕೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಮನೆಯವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ದಾವಣಗೆರೆ ಮೂಲದವನಾಗಿದ್ದು ಕೊರೊನಾ ಸಂದರ್ಭದಲ್ಲಿ ಟ್ರಾವೆಲ್ಸ್ ವ್ಯವಹಾರದಲ್ಲಿ ನಷ್ಟವಾಗಿತ್ತು. ಬೆಂಗಳೂರು ನಗರದ ಅಬ್ಬಿಗೆರೆಯಲ್ಲಿ ವಾಸವಾಗಿದ್ದು, ಆಟೋ ಓಡಿಸುತ್ತಿದ್ದ. ಹಣಕ್ಕಾಗಿ ಅಡ್ಡದಾರಿ ತುಳಿದಿದ್ದ ಆರೋಪಿ ಮಾಸ್ಕ್ ಧರಿಸಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಯ್ಯಪ್ಪನಹಳ್ಳಿ ಹಾಗೂ ರಾಮಮೂರ್ತಿನಗರ ಪೊಲೀಸ್ ಠಾಣೆಗಳಲ್ಲಿ ಆರೋಪಿ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿವೆ. ಕಳ್ಳತನ ಮಾಡಿದ ಚಿನ್ನವನ್ನು ಚಿನ್ನಾಭರಣ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

