ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವಿಧಾನಸೌಧದ ಸಮೀಪವಿರುವ ಎಂ.ಎಸ್. ಬಿಲ್ಡಿಂಗ್ ಎದುರು, ಮುಜರಾಯಿ ಇಲಾಖೆಯ ಹೆಮ್ಮೆಯ ಸಂಕೇತವಾಗಿ ತಲೆಎತ್ತಲಿರುವ ‘ಧಾರ್ಮಿಕ ಸೌಧ’ ಕಟ್ಟಡಕ್ಕೆ ಅತ್ಯಂತ ಸಡಗರದಿಂದ ಗುದ್ದಲಿ ಪೂಜೆ ನೆರವೇರಿಸಲಾಯಿತು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಈ ಯೋಜನೆಯ ವಿಶೇಷತೆಗಳು:
ಭವ್ಯ ಹೊಯ್ಸಲ ವಾಸ್ತುಶಿಲ್ಪದಲ್ಲಿ ಸುಮಾರು 27.70 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.
ಕಮಿಷನರ್ ಕಚೇರಿ, ನ್ಯಾಯಾಲಯದ ಸಭಾಂಗಣ, ಡಿಜಿಟಲ್ ಲೈಬ್ರರಿ ಮತ್ತು ಸುಸಜ್ಜಿತ ಆಡಿಟೋರಿಯಂ ಒಳಗೊಂಡಿರಲಿದೆ.
ರಾಜ್ಯದ 34,564 ಕ್ಕೂ ಹೆಚ್ಚು ದೇವಾಲಯಗಳ ಆಡಳಿತಾತ್ಮಕ ಕೆಲಸಗಳಿಗೆ ಇದು ಏಕೈಕ ಕೇಂದ್ರಬಿಂದುವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ಕೆ ಚಾಲನೆ ನೀಡಿದ್ದು ನನಗೆ ಹೆಮ್ಮೆಯ ವಿಷಯ. ಧಾರ್ಮಿಕ ದತ್ತಿ ಇಲಾಖೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಆಯುಕ್ತ ಶರತ್, ಅನೇಕ ಹಿರಿಯ ಅರ್ಚಕರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

