ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಹೇಳಿರುವಂತೆ ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು. ಅದನ್ನು ನಾವು ಪಾಲನೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏರು ಧ್ವನಿಯಲ್ಲಿ ಎಚ್ಚರಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಕುರಿತು ನನ್ನ ಪರ ವಿರುದ್ಧ ಹೇಳಿಕೆಗಳನ್ನು ಶಾಸಕರು, ಸಚಿವರು ಯಾರೇ ನೀಡುತ್ತಿರಬಹುದು. ಈ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆಗಳೇ ಹೊರತು ಪಕ್ಷಕ್ಕೆ ಒಳ್ಳೆಯದನ್ನು ಮಾಡುವ ಹೇಳಿಕೆಗಳಲ್ಲ ಎಂದರು.
ಒಂದಷ್ಟು ಕಾಂಗ್ರೆಸ್ ನಾಯಕರು ನೀವು ಶುಭಸುದ್ದಿ ತರುವಿರಿ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿದಿನವೂ ನನಗೆ ಶುಭ ದಿನ, ಶುಭ ಜೀವನ, ಶುಭ ಪ್ರಾರಂಭ, ಯಶಸ್ಸಿನ ದಿನ, ಪ್ರತಿ ದಿನವೂ ಕಷ್ಟದ ದಿನವೇ. ಪ್ರತಿ ದಿನವೂ ಏನೂ ಸುಲಭವಾಗಿ ಇರುವುದಿಲ್ಲ. ಜನರ ಕಷ್ಟಗಳನ್ನು ಬಗೆಹರಸಿಬೇಕಾದರೆ ಕಷ್ಟ ಕಾರ್ಪಣ್ಯಗಳು, ಅಡಚಣೆಗಳು, ತೊಡಕುಗಳು ಇದ್ದೇ ಇರುತ್ತವೆ. ಟೀಕೆಗಳು ಬರುತ್ತಲೇ ಇರುತ್ತವೆ. ಟೀಕೆಗಳನ್ನು ಎದುರಿಸಲೇ ಬೇಕು. ನಮ್ಮ ಕೆಲಸವನ್ನು ಮುಂದುವರೆಸಲೇ ಬೇಕು ಎಂದು ಡಿಸಿಎಂ ಶಿವಕುಮಾರ್ ಮಾರ್ಮಿಕವಾಗಿ ತಿಳಿಸಿದರು.
ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ಅವರ ಬಳಿ ಆಗ ನನ್ನ ಕಷ್ಟ, ದುಃಖ, ದುಮ್ಮಾನ, ಸಂತೋಷ, ಬಯಕೆ ಎಲ್ಲವನ್ನೂ ಹೇಳುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ತಿಳಿಸಿದ್ದರು.
ಭೇಟಿ ಮಾಡುವ ಎಲ್ಲರ ಹೆಸರನ್ನು ಹೇಳಲು ಆಗುವುದಿಲ್ಲ. ನಿಮಗೆ ಏಕೆ ಇಷ್ಟು ಕುತೂಹಲ?. ನಾನು ಉಪಮುಖ್ಯಮಂತ್ರಿ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ ಕೂಡ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್-10ಕ್ಕೆ 6 ವರ್ಷವಾಗುತ್ತದೆ. ನಮ್ಮ ಸಂಸದರು, ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಾನು ಭೇಟಿ ಮಾಡುತ್ತಿರುತ್ತೇನೆ. ಆಗ ನನ್ನ ಕಷ್ಟ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದರು.
ಕದ್ದು ಮುಚ್ಚಿ ಮಾತನಾಡಿಕೊಂಡಿಲ್ಲ:
ನನಗೆ ಯಾವ ಗೊಂದಲವೂ ಇಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನಾನು ಹಾಗೂ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದೇವೆ ಎಂಬುದು ನಮಗೆ ಗೊತ್ತು. ನಾವಿಬ್ಬರು ಕದ್ದು ಮುಚ್ಚಿ ಮಾತನಾಡಿಕೊಂಡಿಲ್ಲ. ನಮ್ಮ ಪಕ್ಷದ ವರಿಷ್ಠರು ಎಲ್ಲ ಸೇರಿ ಮಾತನಾಡಿಕೊಂಡಿದ್ದೇವೆ. ಬೇರೆಯವರೆಲ್ಲ ಇದಕ್ಕೆ ಟೆನ್ಷನ್ ತೆಗೆದುಕೊಳ್ಳುವುದು, ಹೇಳಿಕೆ ಕೊಡುವುದರಿಂದ ಯಾರಿಗೂ ಪ್ರಯೋಜನ ಆಗುವುದಿಲ್ಲ ಎಂದು ಡಿಸಿಎಂ ಖಡಕ್ ಆಗಿ ಹೇಳಿದರು.
ನಾವು ಮಾತನಾಡಿದರೆ ನೋಟಿಸ್ ನೀಡುತ್ತಾರೆ ಯತೀಂದ್ರ ಮಾತನಾಡಿದರೆ ಏಕೆ ನೋಟಿಸ್ ನೀಡುವುದಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರು ಪ್ರಶ್ನಿಸಿರುವ ಬಗ್ಗೆ ಕೇಳಿದಾಗ, ಈ ಬಗ್ಗೆ ಹೈಕಮಾಂಡ್ ಕೇಳೋಣ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದರು.
ದೆಹಲಿಗೆ ಹೋದ ಮೇಲೆ ಎಲ್ಲ ನಾಯಕರು ಮತ್ತು ಯಾರು ಸಿಗುತ್ತಾರೋ ಅವರನ್ನು ಭೇಟಿ ಮಾಡಲಾಗುವುದು. ಸಂಸತ್ ಅಧಿವೇಶನ ನಡೆಯುತ್ತಿರುತ್ತದೆ. ಬಿಡುವಿದ್ದರೆ ಖಂಡಿತವಾಗಿ ಭೇಟಿ ಮಾಡುತ್ತೇನೆ. ಎಐಸಿಸಿಯಲ್ಲಿ ಸಭೆಯಿದೆ. ವಿವಿಧ ಚುನಾವಣೆಗಳು ಹಾಗೂ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗುವುದು. ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆಯಿದೆ. ಆದ ಕಾರಣಕ್ಕೆ ನನ್ನನ್ನು ಚರ್ಚೆ ನಡೆಸಲು ಕರೆದಿದ್ದಾರೆ. ನಾನು ಹೋಗುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಮಾಹಿತಿ ನೀಡಿದರು.
ಕೇರಳಕ್ಕೆ ಹೋಗಿದ್ದೆ ನಂತರ ಅಸ್ಸಾಂಗೂ ತೆರಳಬೇಕು. ಇಂದು ಬಜೆಟ್ ಸಭೆ ಇರುವ ಕಾರಣಕ್ಕೆ ಮುಖ್ಯಮಂತ್ರಿಗಳ ಬಳಿ ಬರಲು ಆಗುವುದಿಲ್ಲ ಎಂದು ಮನವಿ ಮಾಡಿದ್ದೆ. ಸೋಮವಾರದಂದು ಅಧಿಕಾರಿಗಳ ಜೊತೆ ಬಜೆಟ್ ಸಭೆ ನಡೆಸಿದ್ದೇನೆ. ಅವರು ಎಲ್ಲವನ್ನು ವಿವರಿಸುತ್ತಾರೆ. ನಂತರ ಬಂದು ಅವರ ಬಳಿ ಮಾತನಾಡುತ್ತೇನೆ ಎಂದು ಡಿಸಿಎಂ ತಿಳಿಸಿದರು.

