ಪತ್ರಕರ್ತರಿಗೆ ಸ್ವಾರ್ಥ ಮುಖ್ಯವಾಗಬಾರದು ಸೇವೆಯೇ ಆದ್ಯತೆಯಾಗಬೇಕು: ನಾಡಿಗ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪತ್ರಕರ್ತರ ವೃತ್ತಿಯಲ್ಲಿ ಎಂದೂ ಸ್ವಾರ್ಥ ಮುಖ್ಯವಾಗಬಾರದು. ಸೇವೆಯೇ ಆದ್ಯತೆಯಾಗಬೇಕು ಎಂದು ಹಿರಿಯ ಪತ್ರಕರ್ತ ಮತ್ತು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಅನಂತ ನಾಡಿಗ್ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯ ಪತ್ರಕರ್ತರಿಗೆ ನೀಡುತ್ತಿರುವ ಕೆಯುಡಬ್ಲೂಜೆ ಗೌರವವನ್ನು ತರೀಕೆರೆಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸ್ವೀಕರಿಸಿ ಮಾತನಾಡಿದರು.

- Advertisement - 

ಹಿರಿಯರಿರಲಿ, ಕಿರಿಯರಿರಲಿ. ನಾವು ಪತ್ರಕರ್ತರಾಗಿ ಸಮಾಜದ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಪ್ರಜ್ಞೆ ಪತ್ರಕರ್ತರಲ್ಲಿ ಇರಬೇಕು. ಸೇವೆ ಮಾಡಬೇಕು ಎನ್ನುವ ಮನೋಭಾವ ಹೃದಯದಲ್ಲಿರಬೇಕು. ಈ ವೃತ್ತಿಗೆ ಬಂದ ಮೇಲೆ ಹಮ್ಮು- ಬಿಮ್ಮಿನಿಂದ ದರ್ಪದ ನಡವಳಿಕೆ ತೋರಿಸುವಂತಾಗಬಾರದು ಎಂದರು.

ಎಪ್ಪತ್ತರ ದಶಕದಲ್ಲಿ ಅಂಚೆ ವಾರ್ತೆ ಮೂಲಕ ಪತ್ರಕರ್ತ ವೃತ್ತಿಗೆ ಬಂದ ನಾನು, ಕನ್ನಡಪ್ರಭ ಪತ್ರಿಕೆಯಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ವರದಿಗಾರನಾಗಿ ಕೆಲಸ ಮಾಡಿರುವುದು ನನ್ನ ಪಾಲಿಗೆ ಸಾರ್ಥಕ ಸೇವೆಯಾಗಿದೆ ಎಂದರು.

- Advertisement - 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, 77 ವಸಂತಗಳನ್ನು ಕಂಡಿರುವ ಹಿರಿಯ ಪತ್ರಕರ್ತರಾದ ಅನಂತ್ ನಾಡಿಗೆ ಅವರ ಮನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿದೆ. ಕೇಳದೆ ಬರದೇ ಪ್ರಶಸ್ತಿಗಳ ಮೌಲ್ಯ ಹೆಚ್ಚು. ಈ ಪ್ರಶಸ್ತಿಯಿಂದಾಗಿ ಅಕಾಡೆಮಿಗೂ ಗೌರವ ಬಂದಿದೆ ಎಂದರು.

ನಾಡಿಗ್ ಅವರು, ಯಾರನ್ನೂ ಎಂದೂ ಕೇಳಿದವರಲ್ಲ. ಪ್ರಶಸ್ತಿಗಳ ಬೆನ್ನು ಹತ್ತಿ ಹೋದವರೂ ಅಲ್ಲ. ತಮ್ಮ ಪಾಡಿಗೆ ತಾವು ಮಾಡುತ್ತಿದ್ದ ಪತ್ರಕರ್ತ ವೃತ್ತಿ ಸೇವೆಗೆ ಪ್ರಶಸ್ತಿ ಸಲ್ಲುತ್ತಿರುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ಪತ್ರಕರ್ತರನ್ನು ಗುರುತಿಸಿ ಗೌರವಿಸುತ್ತಿರುವುದು ವಿಶೇಷ ಎಂದರು.

ಸಂಘದ ಗೌರವಾಧ್ಯಕ್ಷ ಸುರೇಶ್ ಚಂದ್ರ, ಹಿರಿಯ ಪತ್ರಕರ್ತರಾದ ಸಿದ್ರಾಮಪ್ಪ, ಎಚ್.ಕೆ.ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

Share This Article
error: Content is protected !!
";