ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವ್ಯಕ್ತಿಯೊಬ್ಬರು ವಿಧಾನಸೌಧದ ಸಚಿವರ ಕಚೇರಿ ಬಳಿ ಇರಿಸಲಾಗಿದ್ದ ಚಿನ್ನಾಭರಣ ಕಳ್ಳತನ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಬಿಗಿ ಭದ್ರತೆ ನಡುವೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹೇಗೆ ವಿಧಾನಸೌಧದ ಒಳಗೆ ಬರಲು ಸಾಧ್ಯವಾಯಿತು ಎಂಬುದರ ಪತ್ತೆಗಾಗಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವ ನಗರದ ನಿವಾಸದ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಿಧಾನ ಸೌಧದಲ್ಲಿ ಚಿನ್ನ ಕಳವು ಸಂಬಂಧ ಸಿಸಿಟಿವಿ ಆಧರಿಸಿ ಡಿ ದರ್ಜೆ ನೌಕರನನ್ನು ಬಂಧಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಧಾನಸೌಧದ ಗೇಟ್ನಿಂದ ಒಳಗೆ ಹೋಗಿದ್ದೇಗೆ? ಯಾವ ಗೇಟ್ನಿಂದ ಒಳಗೆ ಹೋಯ್ತು? ಅದರಲ್ಲಿಯೂ ಸಚಿವರ ಕಚೇರಿಗೆ ಬ್ಯಾಗ್ ಹೋಗುತ್ತೆ ಅಂದ್ರೆ ಪತ್ತೆ ಹಚ್ಚಬೇಕಲ್ವಾ? ಹೀಗಾಗಿ ತನಿಖೆಗೆ ಆದೇಶಿಸಲಾಗಿದ್ದು, ಇಂದು ಅಥವಾ ನಾಳೆ ವರದಿ ಕೈ ಸೇರಲಿದೆ. ಆ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.
ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಲೆ ಸಂಬಂಧ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅವರಾಗಿಯೇ ಬಂದು ಸರೆಂಡರ್ ಆದರೆ ಒಳ್ಳೆಯದು. ಇಲ್ಲವಾದ್ರೆ ಪೊಲೀಸರು ಬಂಧಿಸಲು ಶೋಧ ನಡೆಸುತ್ತಾರೆ ಎಂದು ಸಚಿವ ಡಾ.ಪರಮೇಶ್ವರ್ ಎಚ್ಚರಿಸಿದರು.
ನಿವೃತ್ತ ನ್ಯಾ. ಕುನ್ಹಾ ಸಮಿತಿಯು ನೀಡಿದ ವರದಿಯಲ್ಲಿ ನೀಡಲಾಗಿದ್ದ ಶಿಫಾರಸುಗಳು ಅನುಷ್ಠಾನವಾಗಿದೆಯಾ ಎಂಬುದರ ಕುರಿತು ಪರಿಶೀಲಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ಅನುಮತಿ ನೀಡುವ ವಿಚಾರ ಮಾಡಲಾಗುತ್ತದೆ. ಇದಕ್ಕಾಗಿಯೇ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು. ಅಲ್ಪಾವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದರೆ ಮಾತ್ರ ಅನುಮತಿ ನೀಡುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಕಾಲ್ತುಳಿತದಲ್ಲಿ ಅಮಾನತು ಆಗಿದ್ದ ಪೊಲೀಸ್ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.
ಚಿನ್ನ ಕಳ್ಳತನ, ಆರೋಪಿ ಬಂಧನ:
ವಿಧಾನಸೌಧದಲ್ಲಿನ ಸಚಿವರ ಕಚೇರಿ ಬಳಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ನಗರದ ನಿವಾಸಿ ನವೀನ್ ಎಂಬುವರು ನೀಡಿದ ದೂರು ಆಧರಿಸಿ ಆಡಳಿತ ಸುಧಾರಣಾ ಮತ್ತು ಸಿಬ್ಬಂದಿ ಇಲಾಖೆಯ ಡಿ ದರ್ಜೆ ನೌಕರ ಆಂಥೋನಿ ಎಂಬುವರನ್ನು ಪೊಲೀಸರು ಬಂಧಿಸಿದ್ಧಾರೆ.
ಅವರಿಂದ 300 ಗ್ರಾಂ ಚಿನ್ನಾಭರಣ ಹಾಗೂ ಒಂದೂವರೆ ಲಕ್ಷ ಹಣ ನಗದನ್ನು ವಶಕ್ಕೆ ಪಡೆದುಕೊಂಡಿದ್ದರು.
ಫೆಬ್ರುವರಿ 4ರಂದು ದೂರುದಾರ ಕೆಲಸ ನಿಮಿತ್ತ ವಿಧಾನಸೌಧದ 3ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದರು. ಭೇಟಿಗೆ ಸಚಿವರು ಸಿಗದ ಕಾರಣ ವಾಪಸ್ ಆಗಿದ್ದರು. ಈ ವೇಳೆ, ತೆಗೆದುಕೊಂಡು ಬಂದಿದ್ದ ಚೀಲವನ್ನ ಮರೆತು ಹೋಗಿದ್ದರು.
ಮಾರನೇ ದಿನ ವಿಧಾನಸೌಧಕ್ಕೆ ಬಂದು ನೋಡಿದಾಗ ಕೈ ಚೀಲ ಕಾಣೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ತಮಗೆ ಗೊತ್ತಿಲ್ಲ ಎಂದು ಕಚೇರಿ ಸಿಬ್ಬಂದಿ ಉತ್ತರಿಸಿದ್ದರು. ಚೀಲದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ನಗದಿರುವ ವಿಚಾರ ತಿಳಿಸಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದರು.
ಚಿನ್ನಾಭರಣ ಕಳವು ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ವಿಧಾನಸೌಧದ ಕಾರಿಡಾರ್ನ ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿಯು ಸಚಿವರ ಕಚೇರಿಯ ಬಾಗಿಲಿಗೆ ಬೀಗ ಹಾಕಿದ ಬಳಿಕ ಇಡಲಾಗಿದ್ದ ಕೈ ಚೀಲ ತೆಗೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ತನಿಖೆ ಚುರುಕುಗೊಳಿಸಿ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.

