ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚಿಸಿಕೊಳ್ಳುತ್ತಿದೆ.
ಮುಖ್ಯಮಂತ್ರಿ ಕುರ್ಚಿ ಫೈಟ್ ಮತ್ತೆ ಮುನ್ನೆಗೆ ಬಂದಿದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದರೆ, ಇತ್ತ ಡಿ.ಕೆ. ಸುರೇಶ್ ಸಹೋದರನ ಪರ ಅಖಾಡಕ್ಕಿಳಿದಿದ್ದಾರೆ.
ಕೊಟ್ಟ ಮಾತಿನ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಮಾಜಿ ಸಂಸದ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ತಾರೆ. ಆ ಬಗ್ಗೆ ನನಗೆ ಈಗಲೂ ಭರವಸೆ ಇದೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ಹೇಳಿಕೆಗೆ ವ್ಯಂಗ್ಯವಾಡಿರುವ ಸುರೇಶ್, ಅವರು ಹೇಳಿದ ಮೇಲೆ ಅದೇ ವೇದ ವಾಕ್ಯ ಎಂದು ವ್ಯಂಗ್ಯವಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಲ ಕಾಂಗ್ರೆಸ್ ಶಾಸಕರಿಗೆ ವಿದೇಶ ಪ್ರವಾಸ ಆಯೋಜಿಸಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶ ಪ್ರವಾಸಕ್ಕೂ ಡಿ.ಕೆ.ಶಿವಕುಮಾರ್ಗೂ ಸಂಬಂಧವಿಲ್ಲ. ಯಾರು ವಿದೇಶ ಪ್ರವಾಸ ಹೋಗ್ತಿದ್ದಾರೆ ಅವರನ್ನೇ ನೀವು ಕೇಳಬೇಕು ಎಂದು ಡಿಕೆ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ-
ನಿಗಮ ಮಂಡಳಿಯಲ್ಲಿ ಬಿಜೆಪಿ ಮುಖಂಡನಿಗೆ ಸ್ಥಾನ ನೀಡಿದ ವಿಚಾರವಾಗಿ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಗೌರವಿಸುತ್ತದೆ ಅಂತಾಯ್ತಲ್ಲ. ರಾಜ್ಯ ಸರ್ಕಾರ ಎಲ್ಲರನ್ನೂ ಕೂಡ ಜೊತೆಗೆ ಕರೆದೊಯ್ಯಬೇಕು. ಕಾಂಗ್ರೆಸ್ ಪಕ್ಷದ್ದು ಸರ್ವಧರ್ಮ ಪಾಲಿಸಿ ಅಲ್ವಾ? ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ ಎಂದು ಮಾಜಿ ಸಂಸದ ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಹೀಗಾಗಿ ಎಲ್ಲ ವಿಚಾರದಲ್ಲೂ ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇಆದ್ಯತೆ ನೀಡಲಾಗುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಅವರು ಕಿಡಿ ಕಾರಿದ್ದಾರೆ.

