ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪದೇ ಪದೇ ಅಧಿಕಾರ ಹಂಚಿಕೆ ಕುರಿತ ಕೇಳುವ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಯಕತ್ವ ಗೊಂದಲದ ಕುರಿತ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಸಿಎಂ ಸಿಟ್ಟಾದ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆಯಿತು.
ಕಳೆದ ಮೂರು ತಿಂಗಳಿಂದಲೂ ಇದೇ ವಿಷಯವನ್ನು ಪದೇ ಪದೇ ಕೇಳಲಾಗುತ್ತಿದೆ. ದಯವಿಟ್ಟು ಇದನ್ನು ಪುನರಾವೃತ್ತಿ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಗರಂ ಆಗಿಯೇ ಹೇಳಿದರು.
ಶಾಸಕರ ವಿದೇಶ ಪ್ರವಾಸದ ವಿಷಯ ಪ್ರಸ್ತಾಪಿಸಿದಾಗ, ತಮ್ಮ ಗಮನಕ್ಕೆ ಬಂದಿಲ್ಲ, ಅದು ವೈಯಕ್ತಿಕ ಖರ್ಚಿನಲ್ಲಿದ್ದರೆ ವಿವಾದ ಏಕೆ ಎಂದು ಸಿಎಂ ಪ್ರಶ್ನಿಸಿದರು.
ನಾನು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಪಕ್ಷದ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ, ಅದನ್ನು ನಾವು ತಪ್ಪದೆ ಪಾಲಿಸುತ್ತೇವೆ. ಇದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸಿದ್ದರಾಮಯ್ಯ ಹೇಳಿದರು.

