ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಶ್ರೀ ಪ್ರಣವಾನಂದ ಶ್ರೀಗಳು ಈಡಿಗ ಬಿಲ್ಲವ ಸೇರಿದಂತೆ 26 ಸಮ ಪಂಗಡಗಳ ಅಭಿವೃದ್ಧಿಗಾಗಿ ಜನವರಿ 6 ರಂದು ಮಂಗಳೂರಿನಿಂದ ಪ್ರಾರಂಭಿಸಿದ 700 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡು ಬೆಂಗಳೂರು ನಗರ ತಲುಪಿದ ಸಂದರ್ಭದಲ್ಲಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡಿದ್ದರು.
ಈಡಿಗ ನಿಗಮಕ್ಕೆ ಅನುದಾನ, ಬೆಂಗಳೂರಿನಲ್ಲಿ ಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ, ಕಲ್ಯಾಣ ಕರ್ನಾಟಕದ ಭಾಗದಲ್ಲಿ ತಮ್ಮ ಕುಲ ಕಸುಬು ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ, ಶ್ರೀ ನಾರಾಯಣ ಗುರುಗಳ ಅಧ್ಯಯನಪೀಠ ಪ್ರಾರಂಭ, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಪುನರ್ ನಾಮಕರಣ, ಮಂಗಳೂರು ವಿಶ್ವವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಪುನರ್ ನಾಮಕರಣ ಸೇರಿದಂತೆ 18 ಬೇಡಿಕೆಗಳನ್ನು ಸಮುದಾಯದ ವತಿಯಿಂದ ಸರ್ಕಾರದ ಮುಂದೂಡಲಾಗಿದ್ದು, ರಾಜ್ಯ ಸರ್ಕಾರ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಅಶೋಕ್ ಆಗ್ರಹಿಸಿದರು.
ವಿವಿಧ ಮಠಾಧೀಶರು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಸುನೀಲ್, ಮತ್ತಿತರ ಗಣ್ಯರು, ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.

