ಕೇಂದ್ರ ಅನುಮತಿ ಕೊಟ್ಟರೆ ಮೇಕೆದಾಟು, ಯುಕೆಪಿ ಯೋಜನೆಗಳ ಜಾರಿ: ಡಿಸಿಎಂ ಶಿವಕುಮಾರ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ ಸರ್ಕಾರವು ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ. ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುವ ಭರವಸೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು.

- Advertisement - 

ನೀವೆಲ್ಲರೂ ಬೆಂಗಳೂರಿನಲ್ಲಿದ್ದೀರಿ. ಇಲ್ಲಿ 1.50 ಕೋಟಿ ಜನಸಂಖ್ಯೆ ಇದ್ದು, ವಿಶ್ವದಾದ್ಯಂತ ಕೈಗಾರಿಕೋದ್ಯಮಿಗಳು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಇಲ್ಲಿರುವ ಹವಾಮಾನ ಹಾಗೂ ಸಂಸ್ಕೃತಿ ಎಲ್ಲರ ಆಕರ್ಷಣೆಯಾಗಿದೆ. ಎಲ್ಲರೂ ಬೆಂಗಳೂರಿಗೆ ಬರಲು ಇಚ್ಛಿಸುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ನಾವು ಸಮತೋಲಿದ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಯೋಜನೆ ಪರವಾಗಿ ತೀರ್ಪು ನೀಡಿದೆ. ಆಮೂಲಕ ನಾವು ಈ ಯೋಜನೆ ಜಾರಿ ಮಾಡಲಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ. ಈ ಯೋಜನೆಯಿಂದ ಬೆಂಗಳೂರು ಸೇರಿದಂತೆ ಈ ಭಾಗದ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆಎಂದು ವಿವರಿಸಿದರು.

ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ನಾವು ಪಾರದರ್ಶಕ ನೀತಿ ತರಲಾಗಿದ್ದು, ಭೂಮಿ ಕಳೆದುಕೊಳ್ಳುವ ರೈತರಿಗೆ 2013ರ ಕಾಯ್ದೆ ಅನುಸಾರ ಉತ್ತಮ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. 2025ರ ಡಿಸೆಂಬರ್ ವೇಳೆಗೆ ನಮ್ಮಲ್ಲಿ 1.72 ಲಕ್ಷ ಎಕರೆಯಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇನ್ನು ಅಣೆಕಟ್ಟು ಸುರಕ್ಷತಾ ಮಾರ್ಗಸೂಚಿಯಲ್ಲಿ ಅಣೆಕಟ್ಟಿನ ಸುತ್ತ 500 ಮೀಟರ್ ವರೆಗೂ ವಿಧಿಸಲಾಗಿರುವ ನಿಬಂಧನೆಯನ್ನು ಸಡಿಲಗೊಳಿಸಬೇಕು. ಆ ಮೂಲಕ ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿ ಸ್ಥಳೀಯ ಆರ್ಥಿಕತೆಗೆ ನೆರವಾಗಬೇಕು ಎಂದು ಕರ್ನಾಟಕ ಸರ್ಕಾರದ ಪರವಾಗಿ ಮನವಿ ಮಾಡುತ್ತೇನೆ ಎಂದು ಕೋರಿದರು.

- Advertisement - 

ಅಣೆಕಟ್ಟುಗಳು ದೇಶದ ಶಕ್ತಿ, ಪ್ರಗತಿಯ ಪ್ರತೀಕ-
ಅಣೆಕಟ್ಟುಗಳು ನಮ್ಮ ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕ. ಅಣೆಕಟ್ಟುಗಳು ನಮ್ಮ ಭವಿಷ್ಯವನ್ನು ಕಾಪಾಡಿ
, ರೈತರನ್ನು ಸಶಕ್ತರನ್ನಾಗಿ ಮಾಡುತ್ತದೆ. ಸ್ವಚ್ಛ ಇಂಧನ ಸೃಷ್ಟಿಸಿ, ನಮ್ಮ ಸಮುದಾಯವನ್ನು ಕಾಯುತ್ತಿವೆ. ನಮ್ಮ ಪೀಳಿಗೆಯನ್ನು ಸುಸ್ಥಿರವಾಗಿಟ್ಟು ಕಾಪಾಡುತ್ತಿರುವ ರಕ್ಷಕನಂತೆ ಕಾರ್ಯನಿರ್ವಹಿಸುತ್ತಿವೆ. ನೀರು ಸಮೃದ್ಧವಾದಷ್ಟು, ನಾಗರೀಕತೆ ಅಭಿವೃದ್ಧಿಯಾಗುತ್ತದೆ. ನಮ್ಮಲ್ಲಿರುವ ಅನೇಕ ಅಣೆಕಟ್ಟುಗಳು 60-70 ವರ್ಷಗಳ ಹಳೆಯದಾಗಿವೆ. ಹೀಗಾಗಿ ಅಣೆಕಟ್ಟುಗಳ ಮೂಲಸೌಕರ್ಯ ದುರಸ್ತಿ ಕಾಮಗಾರಿಗಳು ಅಗತ್ಯವಾಗಿವೆ. ಇದರ ಜತೆಗೆ ಅನಿರೀಕ್ಷಿತ ಹವಾಮಾನ ವೈಪರಿತ್ಯ ನಮಗೆ ಹೆಚ್ಚಿನ ಸವಾಲೊಡ್ಡಿದೆ. ಅತಿಯಾದ ಮಳೆ, ಪ್ರವಾಹ ದೇಶದೆಲ್ಲೆಡೆ ಸಮಸ್ಯೆಯಾಗಿ ತಲೆದೋರಿವೆ. ನಮ್ಮ ಊಹೆಗಳ ಆಧಾರದ ಮೇಲೆ ಭವಿಷ್ಯದ ಅಣೆಕಟ್ಟುಗಳ ನಿರ್ವಹಣೆ ಅಸಾಧ್ಯ. ಹೀಗಾಗಿ ಎಲ್ಲಾ ಸವಾಲಿಗೆ ಪೂರ್ವ ತಯಾರಿ ಮಾಡಿಕೊಳ್ಳುವ ಆಯ್ಕೆಯಾಗಿ ಉಳಿದಿಲ್ಲ, ಅನಿವಾರ್ಯತೆಯಾಗಿದೆ ಎಂದು ತಿಳಿಸಿದರು.

ಅಣೆಕಟ್ಟುಗಳ ಶಕ್ತಿ ಅಡಗಿರುವುದು ಅದನ್ನು ಹೇಗೆ ನಿರ್ಮಾಣ ಮಾಡಲಾಗಿದೆ ಎಂಬುದರ ಮೇಲೆ ಮಾತ್ರವಲ್ಲ, ಅದನ್ನು ಎಷ್ಟು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತದೆ ಎಂಬುದರ ಮೇಲೂ ನಿಂತಿದೆ. ಭಾರತದಲ್ಲಿ ಸುಮಾರು 6500 ಅಣೆಕಟ್ಟುಗಳಿದ್ದು, ವಿಶ್ವದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳಿರುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ 232 ಅಣೆಕಟ್ಟುಗಳಿದ್ದು, ದೇಶದ ಮೂರನೇ ಎರಡು ಭಾಗದಷ್ಟು ಅಣೆಕಟ್ಟುಗಳು 25 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯದಾಗಿವೆ. ಇದು ನಮ್ಮಲ್ಲಿ ಅಣೆಕಟ್ಟುಗಳ ವ್ಯವಸ್ಥಿತ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದನ್ನು ಸಾರುತ್ತಿದೆ. ಇಂದು ಅಣೆಕಟ್ಟುಗಳ ಸುರಕ್ಷತೆ ರಾಷ್ಟ್ರ ಮಟ್ಟದ ಆದ್ಯತೆಯಾಗಿದೆ. ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ ಮೂಲಕ ಅನೇಕ ನೆರವು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಇದರ ಎರಡನೇ ಹಂತವನ್ನು ಜಾರಿಗೊಳಿಸಲಾಗುತ್ತಿದ್ದು, 58 ಅಣೆಕಟ್ಟುಗಳ ದುರಸ್ತಿ ಕಾಮಗಾರಿಗಳಿಗೆ 1500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆಎಂದು ತಿಳಿಸಿದ್ದಾರೆ.

ಕರ್ನಾಟಕವನ್ನು ದೇಶಕ್ಕೆ ಮಾದರಿಯಾಗುವಂತೆ ಮಾಡಲು ಸರ್ಕಾರ ಬದ್ಧ:
ಜಲವೇ ಸಂಪತ್ತು, ಜಲವೇ ಇಂಧನ, ಜಲವೇ ಜೀವನ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ನಮ್ಮ ಆಸ್ತಿಯಾಗಿರುವ ಅಣೆಕಟ್ಟುಗಳನ್ನು ಕಾಪಾಡಿಕೊಳ್ಳೋಣ. ಅಣೆಕಟ್ಟುಗಳು ಕೇವಲ ಇಂಜಿನಿಯರ್ ಆಸ್ತಿ ಮಾತ್ರವಲ್ಲ, ಇದು ನಮ್ಮ ಆಹಾರ ಭದ್ರತೆ, ಇಂಧನ ಭದ್ರತೆ ಹಾಗೂ ಸಾಮಾಜಿಕ ಸ್ಥಿರತೆಯ ಅಸ್ತ್ರವಾಗಿದೆ. ಈ ಸಮ್ಮೇಳನದ ಮೂಲಕ ನಾವು ಪ್ರಬಲ ಶಿಫಾರಸ್ಸು, ಕಾರ್ಯರೂಪಕ್ಕೆ ತರಬಹುದಾದ ತಂತ್ರಗಾರಿಕೆಯನ್ನು ರೂಪಿಸೋಣ. ಕರ್ನಾಟಕ ಸರ್ಕಾರ ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ ಕರ್ನಾಟಕವನ್ನು ದೇಶಕ್ಕೆ ಮಾದರಿ ರಾಜ್ಯವನ್ನಾಗಿ ಮಾಡಲು ಬದ್ಧವಾಗಿದೆ. ನಾವು ಅಣೆಕಟ್ಟುಗಳನ್ನು ನಿರ್ಮಿಸಿ, ರಕ್ಷಿಸಿ, ಮುನ್ನಡೆಸುತ್ತೇವೆ. ಇಂದು ನೀವಲ್ಲರೂ ಇಲ್ಲಿ ಸೇರಿದ್ದೀರಿ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಆ ಮೂಲಕ ನಮ್ಮ ಅಣೆಕಟ್ಟುಗಳನ್ನು ರಕ್ಷಮೆ ಮಾಡಿಕೊಂಡು ದೇಶ ಪ್ರಜ್ವಲಿಸುವಂತೆ ಮಾಡೋಣಎಂದು ಕರೆ ನೀಡಿದರು.

ಅಣೆಕಟ್ಟುಗಳು ನವಭಾರತದ ದೇವಾಲಯ ಎಂದವರು ನೆಹರೂ:
ನಾವೆಲ್ಲರೂ ಇಂದು ನೀರಿನ ನಿರ್ವಹಣೆ, ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ಚರ್ಚೆ ಮಾಡಲು ಸೇರಿದ್ದೇವೆ. ನೀರಿನ ನಿರ್ವಹಣೆಯಲ್ಲಿ ಕರ್ನಾಟಕ ತನ್ನದೇ ಆದ ಪರಂಪರೆ ಹೊಂದಿದೆ. ದೇಶದ ಸ್ವಾತಂತ್ರ್ಯದ ನಂತರ ಪಂಡಿತ್ ಜವಹಾರ್ ಲಾಲ್ ನೆಹರೂ ಅವರ ದೂರದೃಷ್ಟಿಯ ಪರಿಣಾಮವಾಗಿ ಸಾವಿರಾರು ಅಣೆಕಟ್ಟುಗಳನ್ನು ನಿರ್ಮಿಸಲಾಯಿತು. ಅಣೆಕಟ್ಟುಗಳು ನವ ಭಾರತದ ದೇವಾಲಯಗಳು ಎಂದು ನೆಹರೂ ಅವರು ಬಣ್ಣಿಸಿದ್ದರು. ಕೇಂದ್ರ ಜಲಶಕ್ತಿ ಸಚಿವರಾದ ಪಾಟೀಲ್ ಅವರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು. ಆದರೆ ಕೇಂದ್ರ ಸಚಿವ ಸಂಪುಟ ಸಭೆ ಹಾಗೂ ಇತರೆ ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಅವರು ಬರಲು ಸಾಧ್ಯವಾಗಿಲ್ಲ. ಹೀಗಾಗಿ ಜಲಶಕ್ತಿ ರಾಜ್ಯ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಇಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿದೆ. ನಾವು ಈ ಸಮ್ಮೇಳನ ಆತಿಥ್ಯ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಹಳ ಸಂತೋಷ. ಕರ್ನಾಟಕ ಬಹಳ ಇತಿಹಾಸವಿರುವ ರಾಜ್ಯ. 1902ರಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ ಶಿವನ ಸಮುದ್ರದಲ್ಲಿ ಹೈಡ್ರೋ ಎಲೆಕ್ಟ್ರಿಕ್ ಉತ್ಪಾದನಾ ಕೇಂದ್ರ ಸ್ಥಾಪಿಸಲಾಯಿತು. ಅದರೊಂದಿಗೆ ಏಷ್ಯಾದಲ್ಲೆ ವಿದ್ಯುತ್ ಉತ್ಪಾದನಾ ಕೇಂದ್ರ ಇದಾಗಿದೆ ಎಂದರು.

ಇಡೀ ದೇಶದಲ್ಲಿ ಅತಿ ಹೆಚ್ಚು ಇಂಜಿನಿಯರ್ ಗಳನ್ನು ತಯಾರು ಮಾಡುತ್ತಿರುವ ರಾಜ್ಯ ಕರ್ನಾಟಕ. ನಮ್ಮಲ್ಲಿ 250 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿ ವರ್ಷ 1.50 ಲಕ್ಷ ಇಂಜಿನಿಯರ್ ಗಳನ್ನು ತಯಾರು ಮಾಡುತ್ತಿದ್ದೇವೆ. ಇದು ಈ ರಾಜ್ಯ ಶಕ್ತಿ. ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿದೆ. ಇಲ್ಲಿ 25 ಲಕ್ಷ ಇಂಜಿನಿಯರಿಂಗ್ ವೃತ್ತಿಪರರು ಇದ್ದಾರೆ. ಆಮೂಲಕ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಲಾಗುತ್ತಿದೆ. ಆದರೆ ಕ್ಯಾಲಿಫೋರ್ನಿಯಾದಲ್ಲಿ ಕೇವಲ 13 ಲಕ್ಷ ಇಂಜಿನಿಯರಿಂಗ್ ವೃತ್ತಿಪರರು ಇದ್ದಾರೆ. ನಮ್ಮ ಮಹರಾಜರು 19ನೇ ಶತಮಾನದ ಆರಂಭದಲ್ಲೇ ಈ ಜಾಗ ಹಾಗೂ ಸಂಪನ್ಮೂಲವನ್ನು ನೀಡಿ ಈ ಭಾರತೀಯ ವಿಜ್ಞಾನ ಸಂಸ್ಥೆ ಆರಂಭಕ್ಕೆ ನಾಂದಿಯಾಡಿದರು. ಇದು ಜಾಗತಿಕ ಮಟ್ಟದ ಇಂಜಿನಿಯರ್ ಗಳು, ಸಂಶೋಧಕರನ್ನು ನೀಡಿರುವ ಪ್ರತಿಷ್ಠಿತ ಸಂಸ್ಥೆಯಾಗಿದೆ. ಆಮೂಲಕ ದೇಶದ ಪ್ರಗತಿಯಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಡಿಸಿಎಂ ಶಿವಕುಮಾರ್ ಶ್ಲಾಘಿಸಿದರು.

 

 

Share This Article
error: Content is protected !!
";