ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆ 26 ವಿದ್ಯಾರ್ಥಿಗಳು ಅಸ್ವಸ್ಥ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಐಮಂಗಲ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ೨೬ ವಿದ್ಯಾರ್ಥಿನಿಯರು ವಾಂತಿ
, ಬೇದಿಯಿಂದ ಅಸ್ವಸ್ಥಗೊಂಡಿದ್ದು ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಈ  ಘಟನೆ ಸಂಭವಿಸಿರು ಶಂಕೆ ವ್ಯಕ್ತವಾಗಿದೆ.

ವಸತಿ ಶಾಲೆಯಲ್ಲಿ ೨೬೭ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದು ಗುರುವಾರ ಮಧ್ಯಾಹ್ನ ಎಂದಿನಂತೆ ಆಹಾರ ಸೇವನೆ ಮಾಡಿದ್ದಾರೆ. ರಾತ್ರಿ ಅನ್ನ, ಮುದ್ದೆ ಈರೆ ಕಾಯಿ ಮತ್ತು ತರಕಾರಿ ಸಾಂಬಾರು ಸೇವನೆ ಮಾಡಿದ್ದು ರಾತ್ರಿಯಿಂದಲ್ಲೇ ಒಬ್ಬೊಬ್ಬರಾಗಿ ಅನಾರೋಗ್ಯಕ್ಕೆ ತುತ್ತಾಗತೊಡಗಿದ್ದಾರೆ. ಇದರ ಮಾಹಿತಿ ಪಡೆದ ಶಿಕ್ಷಕರು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಇಡ್ಲಿ ಸಾಂಬಾರು ಸೇವನೆಯ ನಂತರ ಅನೇಕ ವಿದ್ಯಾರ್ಥಿನಿಯರು ವಾಂತಿ, ಬೇದಿ, ಆಯಾಸಕ್ಕೆ ಒಳಗಾಗಿದ್ದಾರೆ.

- Advertisement - 

ಈ ಘಟನೆಯಿಂದ ಎಚ್ಚೆತ್ತ ವಸತಿ ಶಾಲೆಯ ಶಿಕ್ಷಕರು ತಕ್ಷಣ ಸ್ಥಳೀಯ ಆರೋಗ್ಯ ಇಲಾಖೆಯ ನೆರವು ಪಡೆದು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ತೆರೆದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದ ವಿದ್ಯಾರ್ಥಿನಿಯರನ್ನು ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ವಿದ್ಯಾರ್ಥಿಗಳು ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಕಲುಷಿತ ಆಹಾರ ಅಥವಾ ನೀರಿನ ಸೇವನೆಯಿಂದ ಈಗಾಗಿರಬಹುದು ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಿ.ವಿಜಯ್ ತಿಳಿಸಿದ್ದಾರೆ.

- Advertisement - 

ಮಕ್ಕಳ ರಕ್ತ, ಮೂತ್ರ ಹಾಗೂ ಟೂಲ್ಸ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವಷ್ಟೇ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಜಯಮ್ಮ ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ವಿಚಾರ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಧೈರ್ಯವಾಗಿರುವಂತೆ ಹೇಳಿದರು. ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳು ಗುಣಮುಖರಾಗುತ್ತಿದ್ದು ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದೇವೆ. ಆಸ್ಪತ್ರೆಯಿಂದ ಹೊರಬಂದ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಕಳುಹಿಸಲಾಗುವುದು ಎಂದು ವಸತಿ ಶಾಲೆಯ ಪ್ರಾಚಾರ್ಯ ಹೆಚ್.ಬಹುಗುಣ ಹೇಳಿದರು.

ಘಟನೆಯ ಬಗ್ಗೆ ತಿಳಿದ ತಕ್ಷಣ ಉಪವಿಭಾಗಾಧಿಕಾರಿ ಕಾಂತರಾಜ್, ಹಿರಿಯೂರು ತಹಶೀಲ್ದಾರ್ ಎಂ.ಸಿದ್ದೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಉಪತಹಶೀಲ್ದಾರ್ ಹೆಚ್.ಸತೀಶ್‌ಕುಮಾರ್, ಕಂದಾಯ ನಿರೀಕ್ಷಕ ಎ.ಜಗದೀಶ್, ಗ್ರಾಮ ಆಡಳಿತಾಧಿಕಾರಿಗಳು, ವಸತಿ ಶಾಲೆಯ ಶಿಕ್ಷಕರುಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಪರಿಶೀಲಿಸಿದರು. ಮಕ್ಕಳು ಅನಾರೋಗ್ಯಕ್ಕೆ ಒಳಗಾದ ತಕ್ಷಣ ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದು ಆತಂಕಗೊಂಡಿದ್ದ ನಾವು ಮಕ್ಕಳು ಗುಣಮುಖರಾಗುತ್ತಿರುವುದನ್ನು ಕಂಡು ಸಮಾಧಾನವಾಗಿದೆ.
ಜಯಮ್ಮ
, ಪೋಷಕರು.

 

Share This Article
error: Content is protected !!
";