ಚಿತ್ರ ನಿರ್ದೇಶಕ ಜೋಸೈಮನ್ ಇನ್ನಿಲ್ಲ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋಸೈಮನ್ ಅವರು ಶುಕ್ರವಾರ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಟ ಹಾಗೂ ನಿರ್ಮಾಪಕ ಜಯಸಿಂಹ ಮುಸರಿ ಅವರು ಮಾಹಿತಿ ನೀಡಿ, ಫಿಲ್ಮ್ ಚೇಂಬರ್ ಕಮಿಟಿ‌ಸಭೆಗೆ ಆಗಮಿಸಿದ್ದ ಜೋಸೈಮನ್ ಅವರು ಪ್ರತ್ಯೇಕವಾಗಿ ಕುರ್ಚಿಯಲ್ಲಿ ಕುಳಿತಿದ್ದರು. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಜೋಸೈಮನ್ ಅವರು ಮೂಲೆಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದಾರೆ, ಅಲ್ಲಾಡುತ್ತಿಲ್ಲ ಬನ್ನಿ ಎಂದು ಅಲ್ಲಿದ್ದವರೊಬ್ಬರು ಮಾಹಿತಿ ನೀಡಿದ್ದರು. ತಕ್ಷಣ ಸಭೆಯನ್ನು ಸ್ಥಗಿತಗೊಳಿಸಿ ಸೀದಾ ಆಂಬ್ಯುಲೆನ್ಸ್​ ಬುಕ್​ ಮಾಡಿ ಸಮೀಪದ ಮಲ್ಲಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಜೋಸೈಮನ್ ನಿಧನರಾಗಿದ್ದರು.
ಸದ್ಯ ಜೋಸೈಮನ್ ಪಾರ್ಥಿವ ಶರೀರ ಮಲ್ಲಿಗೆ ಆಸ್ಪತ್ರೆಯಲ್ಲಿದೆ. ಜೋಸೈಮನ್ ಅವರ ಪುತ್ರ ಬಂದ ಕೂಡಲೇ ಅವರ ಪಾರ್ಥಿವ ಶರೀರ ಮನೆಗೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

- Advertisement - 

ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಹೇಳಿಕೆ:
ತುರ್ತು ಕಾರ್ಯಕಾರಿ ಸಭೆ ಕರೆದಿದ್ದೆವು. ಆಗ ಜೋಸೈಮನ್ ತುಂಬಾ ಒಳ್ಳೆ ಅಭಿಪ್ರಾಯಗಳನ್ನು ನೀಡಿದರು. ಇಡ್ಲಿ ತಿಂದು ನಗುನಗುತ್ತಾ ಇದ್ದರು. ಆಮೇಲೆ ನೋಡಿದರೆ ಹೀಗಾಗಿದೆ. ತಕ್ಷಣ ಅವರಿಗೆ ಸಕ್ಕರೆ
, ನೀರು ಕೊಟ್ಟೆವು. ಬಳಿಕ ಸದಸ್ಯರು ಎತ್ತಿಕೊಂಡು ಆಸ್ಪತ್ರೆಗೆ ಸೇರಿಸಿದರು. ತುಂಬಾ ಆರೋಗ್ಯವಾಗಿದ್ದರು. ಯಾವುದೇ ಆರೋಗ್ಯ ಸಮಸ್ಯೆ ಇದ್ದಿರಲಿಲ್ಲ. ಈ ಘಟನೆಯಿಂದ ಆಘಾತ‌ಉಂಟಾಗಿದೆ ಎಂದು ನೂತನ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷೆ ನಟಿ ಜಯಮಾಲಾ ಬೇಸರ ವ್ಯಕ್ತಪಡಿಸಿದರು.

ಸುಂದರ್ ರಾಜ್ ಪ್ರತಿಕ್ರಿಯೆ:
ನಮ್ಮ ಕಾರ್ಯಕಾರಿ ಮೀಟಿಂಗ್ ಶುರುವಾಗಿದ್ದ ಸಂದರ್ಭದಲ್ಲಿ ಒಳ್ಳೊಳ್ಳೆ ವಿಚಾರಗಳನ್ನು ಹೇಳಿದರು. ಹೇಗೆ ನಮ್ಮ ಚಿತ್ರರಂಗದಲ್ಲಿ ವಾಕ್ ಚಿತ್ರ ಆರಂಭ ಆಗಿತ್ತು ಎಂಬುದರ ಬಗ್ಗೆ ಹೇಳಿದರು. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ 93 ವರ್ಷ ಆಗುತ್ತಾ ಇದೆ. ಆ ವಿಚಾರಕ್ಕೆ ಸಾಕಷ್ಟು ಸಲಹೆಗಳನ್ನು ಅವರು ನೀಡಿದರು. ಕನ್ನಡ ಚಿತ್ರರಂಗದಲ್ಲಿ ಫಿಲ್ಮ್ ಚೇಂಬರ್​ನಲ್ಲಿ ನಡೆದ ಮೊದಲ ಘಟನೆ ಇದು. ಶನಿವಾರ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಜೋಸೈಮನ್ ಅವರ ಪಾರ್ಥೀವ ಶರೀರ ಇಡಲಾಗುವುದು.

- Advertisement - 

ಬಳಿಕ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ. ನನ್ನ ಒಳ್ಳೆಯ ಗೆಳೆಯ ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಸಂತಾಪ ಸೂಚಿಸಿದ ನಟ ಸುಂದರ್ ರಾಜ್ ಈ ಸಂದರ್ಭದಲ್ಲಿ ಪುರಂದರದಾಸರ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಯಾರು ಶಾಶ್ವತ ಅಲ್ಲ ಎಂಬುದನ್ನು ನೆನಪಿಸಿಕೊಂಡು ಹೇಳಿದರು.

ಸಾಹಸಸಿಂಹ ಬಿರುದು ಕೊಟ್ಟವರೇ ಜೋಸೈಮನ್: ನಟ ವಿಷ್ಣುವರ್ಧನ್​ ಅವರಿಗೆ ಸಾಹಸಸಿಂಹ ಬಿರುದನ್ನು ಕೊಟ್ಟವರು ಇವರೇ.. ಅಲ್ಲದೆ ಹಾಸ್ಯ ನಟನಾಗಿಯೂ ಅಭಿನಯಿಸಿದ್ದ ಜೋಸೈಮನ್ ಅವರು ನಟ ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಹಲವು ಖ್ಯಾತ ನಟರ ಸಿನಿಮಾಗಳಿಗೆ ನಿರ್ದೇಶನ ನೀಡಿದ್ದರು.​
ಇನ್ನು ಜೀವಮಾನದ ಸಾಧನೆಗಾಗಿ “ದಾದಾಸಾಹೇಬ್​ ಫಾಲ್ಕೆ” ಅಚೀವರ್​ ಪ್ರಶಸ್ತಿಯನ್ನು 2024ರಲ್ಲಿ ನಿರ್ದೇಶಕ ಜೋಸೈಮನ್ ಅವರು ಪಡೆದಿದ್ದರು.

 

Share This Article
error: Content is protected !!
";