ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ತಳಕು ಹೋಬಳಿಯ ಘಟಪರ್ತಿಗ್ರಾಮದಲ್ಲಿ ಗಂಡನೊಂದಿಗೆ ೧೦ ವರ್ಷಗಳ ಸಂಸಾರ ನಡೆಸಿ ಎರಡು ಮಕ್ಕಳನ್ನು ಪಡೆದ ನಂತರವೂ ಗಂಡ ಪರಸ್ತ್ರಿಯೊಂದಿಗೆ ಅಕ್ರಮ ಸಂಬಂಧಹೊಂದಿದ್ದಕ್ಕೆ ನೊಂದ ಪತ್ನಿ ಗಂಡನ ಮನೆಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಜಗಲೂರುತಾಲ್ಲೂಕಿನ ಭರಮಸಮುದ್ರದ ಅಜ್ಜಯ್ಯ ಎಂಬ ವ್ಯಕ್ತಿ ಈ ಬಗ್ಗೆ ದೂರು ನೀಡಿ, ತನ್ನ ತಂಗಿ ಬಸಮ್ಮ(೩೨)ಳನ್ನು ಘmಪರ್ತಿ ಗ್ರಾಮದ ತಿರುಮಲೇಶ್ ಎಂಬುವವನಿಗೆ ಕೊಟ್ಟು ೨೦೧೬ರಲ್ಲಿ ಮದುವೆಮಾಡಿಕೊಡಲಾಗಿತ್ತು. ಇವರಿಗೆ ದಿಶಾಂತ್, ಜಸ್ವಿಕ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಆದರೆ, ಇತ್ತೀಚಿಗೆ ಈಕೆಯ ಗಂಡ ತಿರುಮಲೇಶ ಬೆಂಗಳೂರಿನಲ್ಲಿ ನೆಲೆಸಿರುವ ಗ್ರಾಮದ ಪದ್ಮಳೊಂದಿಗೆ ನಿರಂತರವಾಗಿ ದೂರವಾಣಿ ಮೂಲಕ ಸಂಪರ್ಕ ಮಾಡುತ್ತಿದ್ದಲ್ಲದೆ ಆಕೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದು, ಇದರಿಂದ ಇಬ್ಬರಲ್ಲೂ ಆಗಾಗ ಜಗಳವಾಡುತ್ತಿದ್ದು, ರಾಜಿ ಮಾಡಲಾಗಿತ್ತು.
ಫೆ.೧೪ರ ಸಂಜೆ ಬಸಮ್ಮ@ ಭಾಗ್ಯಮ್ಮ ಗಂಡ ತಿರುಮಲೇಶನೊಂದಿಗೆ ಜಗಳವಾಡಿ, ಶುಕ್ರವಾರ ಬೆಳಗಿನ ಜಾವ ಅಡಿಗೆ ಮನೆಯಲ್ಲೇ ತನ್ನ ಸೀರೆಯಿಂದ ನೇಣುಹಾಕಿಕೊಂಡು ಮೃತಪಟ್ಟಿದ್ದು, ಈ ಬಗ್ಗೆ ಮಾಹಿತಿ ಪಡೆದ ಮೃತಳ ಅಣ್ಣ ತಳಕು ಪೊಲೀಸರಿಗೆ ದೂರು ನೀಡಿದ್ದಾರೆ. ತಳಕು ಎಎಸ್ಐ ಮಂಜಣ್ಣ ಪ್ರಕರಣ ದಾಖಲಿಸಿ ಮೃತಳ ಪತಿ ತಿರುಮಲೇಶನನ್ನು ವಶಕ್ಕೆ ಪಡೆದಿದ್ದಾರೆ.

