ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದ 5ನೇ ಆರೋಪಿ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಅವರನ್ನು 7 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ 42ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶರು ಆದೇಶಿಸಿದ್ದಾರೆ.
ನಗರದ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ಕೋರಮಂಗಲದ ನಿವಾಸಕ್ಕೆ ಬೈರತಿ ಬಸವರಾಜ್ ಅವರನ್ನು ಹಾಜರುಪಡಿಸಲಾಗಿತ್ತು.
ಈ ವೇಳೆ ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಗೌತಮ್ ಅವರು ಶಾಸಕರ ಆಂಜಿಯೋಗ್ರಾಮ್ ವರದಿಯನ್ನು ನ್ಯಾಯಾಧೀಶರ ಮುಂದೆ ಸಲ್ಲಿಸಿದರು. ವರದಿ ಪರಿಶೀಲಿಸಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಬೈರತಿ ಬಸವರಾಜ್ ಅವರನ್ನು ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ಕಳೆದ ಜುಲೈ 15ರಂದು ರಾತ್ರಿ ರೌಡಿಶೀಟರ್‌ಬಿಕ್ಲು ಶಿವ ಅಲಿಯಾಸ್‌ಶಿವಪ್ರಕಾಶ್‌ಕೊಲೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ 8-9 ಜನ ದುಷ್ಕರ್ಮಿಗಳು ಶಿವಪ್ರಕಾಶ್‌ನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.
ತಾಯಿ ದೂರು:
ಮೃತ ಶಿವಪ್ರಕಾಶ್‌ತಾಯಿ ವಿಜಯಲಕ್ಷ್ಮಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಜಗದೀಶ್, ಕಿರಣ್, ವಿಮಲ್, ಅನಿಲ್‌ಮತ್ತು ಬೈರತಿ ಬಸವರಾಜ್, ಇತರರ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್‌ದಾಖಲಾಗಿತ್ತು. ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ, ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು. ಬಳಿಕ ವಿಚಾರಣಾ ನ್ಯಾಯಾಲಯವೂ ಕೂಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.
ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೈರತಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಕಳೆದ ಗುರುವಾರ ಸುಪ್ರೀಂ ಕೋರ್ಟ್ ಕೂಡ ಅವರ ಅರ್ಜಿಯನ್ನು ವಜಾಗೊಳಿಸಿ, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿತ್ತು.
ಇದಾದ ಬಳಿಕ, ಬೈರತಿ ಬಸವರಾಜ್ ಅವರು ಫೆಬ್ರವರಿ 12ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದಿದ್ದರು.
ಬೈರತಿ ಆಗಮನ ವಿಚಾರ ತಿಳಿಯುತ್ತಿದ್ದಂತೆ, ದೇವನಹಳ್ಳಿ ವಿಭಾಗದ ಎಸಿಪಿ ಶ್ರೀಹರ್ಷ ನೇತೃತ್ವದ ತಂಡ ಬಂಧನಕ್ಕಾಗಿ ಕಾದು ಕುಳಿತಿತ್ತು. ಅಂದು ಸಂಜೆ 6.45ಕ್ಕೆ ಬೈರತಿ ವಶಕ್ಕೆ ಪಡೆದು ಸಿಐಡಿ ಸುಪರ್ದಿಗೆ ಒಪ್ಪಿಸಿದ್ದರು.

