ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ನಡೆದ ವಿಬಿ ಜಿ ರಾಮ್ ಜಿ ಜಾಗೃತ ಅಭಿಯಾನದ ಜಿಲ್ಲಾ ಸಭೆಯಲ್ಲಿ, ವಿಕಸಿತ ಭಾರತ ನಿರ್ಮಾಣ ಮತ್ತು ಕೇಂದ್ರದ ನೂತನ ಉದ್ಯೋಗ ಖಾತರಿ ಯೋಜನೆಗಳ ಕುರಿತು ಅರಿವು ಮೂಡಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆ ಭಾರತ ಸರ್ಕಾರದ ಹೊಸ ಉದ್ಯೋಗ ಖಾತರಿ ಯೋಜನೆಯಾಗಿದೆ. ಈ ಯೋಜನೆಯು ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 125 ದಿನಗಳ ಕಾಲ ಖಚಿತವಾದ ಉದ್ಯೋಗ ನೀಡುವ ಗುರಿ ಹೊಂದಿದೆ. ಇದು ಹಿಂದಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಬದಲಿಗೆ ಜಾರಿಗೆ ಬಂದಿದೆ ಎಂದು ತಿಳಿಸಿದರು.
ನರೇಗಾದಡಿ ಸಾಕಷ್ಟು ಅಕ್ರಮಗಳನ್ನು ಕಾಂಗ್ರೆಸ್ ಎಸಗುತ್ತಿತ್ತು. ನರೇಗಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ವಿಬಿ ಜಿ ರಾಮ್ ಜಿ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ಜಿ ರಾಮ್ ಜಿ ಯೋಜನೆ ಮೂಲಕ ಆರ್ಥಿಕ ದುರುಪಯೋಗ ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಉದ್ಯೋಗ ಖಾತರಿ ಯೋಜನೆಯ ದಿನಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ ಮೇಲ್ವಿಚಾರಣೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ತಪಾಸಣೆ. ಕೆಲಸ ಕೇಳಿದ 15 ದಿನಗಳಲ್ಲಿ ಉದ್ಯೋಗ ನೀಡದಿದ್ದರೆ ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ನೀಡಬೇಕು ಎಂದು ನವೀನ್ ತಿಳಿಸಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೆ ಅನಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆಗೆ ಹೊಸ ರೂಪ ನೀಡಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ರಾಜಕೀಯ ಪ್ರೇರಿತ ವಿರೋಧ ಮಾಡುತ್ತಿವೆ. ಈ ಕುರಿತು ಜನಜಾಗೃತಿ ಮೂಡಿಸಲು ಹಾಗೂ ಗ್ರಾಮೀಣ ಜನರಿಗೆ ಯೋಜನೆಯ ಮಾಹಿತಿ ಒದಗಿಸಲು ಅಭಿಯಾನ ನಡೆಸಲಾಗುತ್ತಿದೆ ಎಂದರು.
ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಖಾತರಿ ಮೂಲಕ ವರ್ಷಕ್ಕೆ 125 ದಿನಗಳ ಕಾಲ ಖಚಿತವಾದ ಉದ್ಯೋಗ ಒದಗಿಸಲಿದೆ. ಈ ಯೋಜನೆಯಿಂದ ಶಾಶ್ವತ ಆಸ್ತಿಗಳ ಸೃಜನೆ ಆಗಲಿದೆ. ಜಲ ಸಂರಕ್ಷಣೆ, ಗ್ರಾಮೀಣ ರಸ್ತೆಗಳು, ಗೋದಾಮುಗಳು ಮತ್ತು ಮಾರುಕಟ್ಟೆಗಳಂತಹ ದೀರ್ಘಕಾಲ ಬಾಳಿಕೆ ಬರುವ ಉಪಯುಕ್ತ ಆಸ್ತಿಗಳ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೃಷಿ ಚಟುವಟಿಕೆಗಳಿಗೆ ಪೂರಕವಾದ ಯೋಜನೆ ಇದಾಗಿದ್ದು ರೈತರಿಗೆ ಬಿತ್ತನೆ ಮತ್ತು ಸುಗ್ಗಿಯ ಕಾಲದಲ್ಲಿ ಕೆಲಸಗಾರರ ಕೊರತೆಯಾಗದಂತೆ ತಡೆಯಲು ವರ್ಷಕ್ಕೆ ಒಟ್ಟು 60 ದಿನಗಳ ಕಾಲ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಅಧಿಕಾರ ಹೊಂದಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮುಖಂಡರಾದ ಮಾಧುರಿ ಗಿರೀಶ್, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

