ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಪೊಲೀಸರು ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆ ನಡೆಸಿ ಮಾದಕ ದಂಧೆಕೋರರಿಂದ 10.59 ಕೋಟಿ ಮೌಲ್ಯದ ಮಾದಕ ಪದಾರ್ಥ ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದೇಶಿಯರು ಸೇರಿದಂತೆ ಒಟ್ಟು 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಭಾರತಕ್ಕೆ ಕ್ರೀಡಾ ವೀಸಾ ಪಡೆದು ಬಂದು ಮಾದಕ ದಂಧೆಯಲ್ಲಿ ತೊಡಗಿದ್ದ ದಕ್ಷಿಣ ಆಫ್ರಿಕಾ ಮೂಲದ ಕೊರ್ಲಿ ಡೇನಿಯಲ್‌ಎಂಬಾತನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳದಲ್ಲಿ ಆಯೋಜಿಸುತ್ತಿದ್ದ ಫುಟ್‌ಬಾಲ್ ಪಂದ್ಯಗಳಲ್ಲಿ ಆಡುತ್ತಿದ್ದ ಆರೋಪಿ, ಮತ್ತೊಂದೆಡೆ ಮಾದಕ ಪದಾರ್ಥಗಳ ದಂಧೆಯಲ್ಲಿ ತೊಡಗಿದ್ದ. ಬಂಧಿತನಿಂದ 4.48 ಲಕ್ಷ ಮೌಲ್ಯದ 56 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್ ವಶಪಡಿಸಿಕೊಳ್ಳಲಾಗಿದೆ. ವಿದೇಶದಿಂದ ಚಾಕೊಲೇಟ್‌ಮತ್ತು ವೇಫರ್ಸ್ ಕವರ್‌ಗಳಲ್ಲಿ ಹೈಡ್ರೋ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಪೆಡ್ಲರ್‌ಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.
ಕೇರಳ ಮೂಲದ ಮಜೀದ್ ಹಾಗೂ ಆಜಾದ್ ಎಂಬವನನ್ನು ಬಂಧಿಸಲಾಗಿದ್ದು, 5 ಕೋಟಿ ಮೌಲ್ಯದ 5 ಕೆ.ಜಿ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿಗೆ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ ತರುತ್ತಿದ್ದ ಆರೋಪಿಗಳ ಜಾಲ ಭೇದಿಸುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿವಿಧ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಸೆನೆಗಲ್ ಪ್ರಜೆಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾರಿ ಯಾಯ ಅಲಿಯಾಸ್ ಒಕೊಲಿ ಬಂಧಿತ ಆರೋಪಿಯಾಗಿದ್ದು, 29 ಎಲ್‌ಎಸ್‌ಡಿ ಮಾತ್ರೆಗಳು, 546 ಗ್ರಾಂ ಎಂಡಿಎಂಎ, 152 ಗ್ರಾಂ ಹೈಡ್ರೋ ಗಾಂಜಾ, 131 ಗ್ರಾಂ ಕೊಕೇನ್ ಹಾಗೂ 27 ಎಲ್‌ಎಸ್‌ಡಿ ಸ್ಟ್ರಿಪ್ಸ್ ಸೇರಿದಂತೆ 1.5 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ರಾಹಿಂ ಎಂಬ ವಿದೇಶಿಗನನ್ನು ಬಂಧಿಸಲಾಗಿದೆ. ಈತನಿಂದ 11 ಕೋಟಿ ಮೌಲ್ಯದ 5 ಕೆ.ಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ವ್ಯಾಪಾರ ವೀಸಾದಡಿ ಭಾರತಕ್ಕೆ ಬಂದಿದ್ದ ಇಬ್ರಾಹಿಂ, ಈ ಹಿಂದೆ ದೆಹಲಿ, ಬೆಂಗಳೂರು ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಮಾದಕ ಪದಾರ್ಥಗಳ ಮಾರಾಟ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದರೂ ಮತ್ತೆ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

