ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಸ ವಿಲೇವಾರಿಗೆ ಅಡ್ಡಿ ಪಡಿಸಿದರೆ ಎಸ್ಮಾ ಜಾರಿ ಮಾಡಲಾಗುತ್ತದೆ. ಗೌರವದಿಂದ ಕಸ ವಿಲೇವಾರಿ ಮಾಡಲು ಬಿಡಿ ಎಂದು ಶಾಸಕರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ಅಸಮರ್ಪಕ ಕಸ ವಿಲೇವಾರಿ ವಿರೋಧಿಸಿ ನಗರದ ಮಿಟಗಾನಹಳ್ಳಿ, ಬೆಳ್ಳಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಕಸದ ವಾಹನಗಳನ್ನು ತಡೆಯಲಾಗಿದೆ. ಕಸದ ವಿಚಾರವಾಗಿ ಶಾಸಕರು ಬ್ಲ್ಯಾಕ್ಮೇಲ್ ಮಾಡುತ್ತಿದ್ಧಾರೆ. ಅರವಿಂದ ಲಿಂಬಾವಳಿ, ಶಾಸಕ ಧೀರಜ್ ಮುನಿರಾಜ್ ಕಸದ ಲಾರಿ ತಡೆಗಟ್ಟಿದ್ದಾರೆ. ಗೌರವದಿಂದ ಕಸ ವಿಲೇವಾರಿಗೆ ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ (ಎಸ್ಮಾ) ಪ್ರಕರಣ ದಾಖಲಿಸುತ್ತೇನೆ ಎಂದು ಎಚ್ಚರಿಸಿದರು.
ಕಸ ಹಾಕಿಸಬೇಕಾ?:
ಶಾಸಕರು ಅನುದಾನಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹೀಗೆ ಮಾಡಿದರೆ ಆರ್.ಅಶೋಕ್, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿ ಮುಂದೆ ಕಸ ಹಾಕಿಸಬೇಕಾ? ಎಂದು ತೀಕ್ಷ್ಣವಾಗಿ ಡಿಸಿಎಂ ಪ್ರಶ್ನಿಸಿದರು.
ಯಾವ ಉದ್ದೇಶಕ್ಕೆ ಶಾಸಕರುಗಳು ಬ್ಲ್ಯಾಕ್ಮೇಲ್ಮಾಡುತ್ತಿದ್ದಾರೆ ಎಂದು ಕೇಳಿದಾಗ, ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಈ ಹಿಂದಿನಿಂದ ಏನು ಕೆಲಸ ಮಾಡಿಕೊಂಡು ಬರಲಾಗುತ್ತಿತ್ತೊ ಅದೇ ಕೆಲಸವನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು.
ಕಸದ ಲಾರಿಯಿಂದ ಅಪಘಾತವಾಗಿದೆ ಎನ್ನುವ ಕಾರಣಕ್ಕೆ ಕಸ ವಿಲೇವಾರಿಗೆ ಅಡ್ಡಿ ಪಡಿಸಿದರೆ ಹೇಗೆ, ಅಪಘಾತ ಆಗಬಾರದಿತ್ತು ಆಗಿದೆ. ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಎಸ್.ಟಿ.ಸೋಮಶೇಖರ್, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದರು.
ಜಾಗ ಖರೀದಿ:
ಕಸ ವಿಲೇವಾರಿ ಮಾಡಲು ಎರಡು ಜಾಗಗಳನ್ನು ಹೊಸದಾಗಿ ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಗುತ್ತಿಗೆದಾರರ ಸಂಘದ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, 37 ಸಾವಿರ ಕೋಟಿ ಬಾಕಿ ಇದೆ ಎಂದು ಗುತ್ತಿಗೆದಾರರು ದೂರು ನೀಡಲಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಗಿರುವ ಕಾಮಗಾರಿ ಸಂಬಂಧ ಸರ್ಕಾರದ ಬಳಿ ಹಣವಿಲ್ಲ. ಕಾಮಗಾರಿ ಕೈಗೆತ್ತಿಕೊಳ್ಳದಂತೆ ಸೂಚಿಸಿದ್ದರೂ ಗುತ್ತಿಗೆದಾರರು ಕಿವಿಗೊಡಲಿಲ್ಲ ಎಂದು ಡಿಸಿಎಂ ದೂರಿದರು. ಗುತ್ತಿಗೆದಾರರು ಬ್ಲ್ಯಾಕ್ ಮೇಲ್ ಮಾಡುವುದಿದ್ದರೆ ಮಾಡಲಿ. ನಮ್ಮ ಸರ್ಕಾರವು ಕೈಗೊಳ್ಳುವ ಕಾಮಗಾರಿಗೆ ಬಜೆಟ್ನಲ್ಲಿ ನೀಡಲಾಗಿರುವ ಹಣ ನೀಡಲಾಗುತ್ತಿದೆ. ಬಜೆಟ್ ಆದ ಬಳಿಕ ಗುತ್ತಿಗೆದಾರರ ಬಾಕಿ ಹಣದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

