ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ನಷ್ಟವನ್ನು ಅನುಭವಿಸುತ್ತಿವೆ. ಇದರ ಮಧ್ಯೆ ಶಕ್ತಿ ಯೋಜನೆ ಸಹ ಹೊಡೆತಕೊಟ್ಟಿದ್ದು, ವ್ಯಕ್ತಿಯೊಬ್ಬರು ಕೋರ್ಟ್ಗೆ ಸಲ್ಲಿಸಿದ್ದ ಪಿಐಎಲ್ನಲ್ಲಿ ಕರ್ನಾಟಕ ಸಾರಿಗೆ ನಿಗಮಗಳು ಆರ್ಥಿಕ ಪರಿಸ್ಥಿತಿ ಬಹಿರಂಗವಾಗಿದೆ.
ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರವಾಗಿ ಪಿಐಎಲ್ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ ಸಿಬ್ಬಂದಿಗೆ ವೇತನ ನೀಡುವುದೇ ಕಷ್ಟವೆಂಬ ಪರಿಸ್ಥಿತಿ ಇದೆ ಎಂದು ಹೈಕೋರ್ಟ್ಗೆ ಸಾರಿಗೆ ನಿಗಮಗಳ ಪರ ವಕೀಲ ಒಪ್ಪಿಕೊಂಡಿದ್ದಾರೆ.
ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರವಾಗಿ ದಾವಣಗೆರೆಯ ತಾಹಿರ್ ಹುಸೇನ್ ಎನ್ನುವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕೋವಿಡ್ ಸಂದರ್ಭದಲ್ಲಿ 323 ಉದ್ಯೋಗಿಗಳು ಮೃತಪಟ್ಟಿದ್ದಾರೆ.
ಆದರೆ 7 ಕುಟುಂಬಗಳಿಗೆ ಮಾತ್ರ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದವರಿಗೆ ಹಣ ನೀಡಿಲ್ಲವೆಂದು ಅರ್ಜಿದಾರರ ಆರೋಪಿಸಿದ್ದಾರೆ.
ಸಾರಿಗೆ ನಿಗಮಗಳ ಪರ ವಕೀಲ ವಾದ ಮಂಡಿಸಿ, ಸಾರಿಗೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಸಿಬ್ಬಂದಿಗೆ ವೇತನ ನೀಡುವುದೇ ಕಷ್ಟವೆಂಬ ಪರಿಸ್ಥಿತಿ ಇದೆ. ಹೀಗಾಗಿ ಪರಿಹಾರ ನಿರ್ಣಯ ಜಾರಿಗೊಳಿಸದಿರಲು ನಿಗಮಗಳು ನಿರ್ಧರಿಸಿವೆ ಎಂದು ಹೇಳಿದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ? ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿಯ ವಿವರ ಮಾರ್ಚ್- 23ರೊಳಗೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿ ಆದೇಶಿಸಿದೆ.

