ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತನ್ನ ವೈಫಲ್ಯಗಳನ್ನ, ಯಡವಟ್ಟುಗಳನ್ನ, ಭ್ರಷ್ಟಾಚಾರವನ್ನ ಮುಚ್ಚಿಟ್ಟುಕೊಳ್ಳುವ ಸಲುವಾಗಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ತಮ್ಮ ಸರ್ವೋಚ್ಛ ನಾಯಕ ರಾಹುಲ್ ಗಾಂಧಿ ಅವರು ಹೋದ ಬಂದಲ್ಲೆಲ್ಲ ಪ್ರದೇಶನ ಮಾಡುವ ಕೆಂಪು ಸಂವಿಧಾನದ ಪುಸ್ತಕದಲ್ಲಿ ಮಾಧ್ಯಮಗಳಿಗೆ ಪತ್ರಿಕಾ ಸ್ವಾತಂತ್ರ್ಯ ಇಲ್ಲವೇ? ಅಥವಾ ಇತ್ತೀಚೆಗೆ ಮಾಧ್ಯಮಗಳು ಬಯಲು ಮಾಡಿದ ತಮ್ಮ ಅತ್ಯಾಪ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ ನಡೆದ ಲಕ್ಷಾಂತರ ರೂಪಾಯಿ ಚಿನ್ನ, ನಗದು ಕಳ್ಳತನದಂತಹ ಪ್ರಕರಣಗಳು, ಅಕ್ರಮ ವ್ಯವಹಾರಗಳು ಇನ್ನಷ್ಟು ಬಯಲಾಗುತ್ತವೆ ಎನ್ನುವ ಭಯವೋ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ವಿಧಾನಸೌಧ ನಿಮ್ಮ ಕಾಂಗ್ರೆಸ್ ಪಕ್ಷದ ಕಚೇರಿ ಅಲ್ಲ ಸ್ವಾಮಿ, ಅದು ಪ್ರಜಾಸೌಧ, ಏಳು ಕೋಟಿ ಕನ್ನಡಿಗರಿಗೆ ಸೇರಿದ ಶಕ್ತಿಸೌಧ. ಅಲ್ಲಿಗೆ ಮಾಧ್ಯಮದವರನ್ನು ಬರಬೇಡಿ ಎಂದು ನಿಯಂತ್ರಣ ಮಾಡಲು ಯಾರಿಗೂ ಅಧಿಕಾರವಿಲ್ಲ.
ಮಾಧ್ಯಮದವರು ವಿಧಾನಸೌಧದ ನಿಗದಿತ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡಬೇಕು ಎನ್ನುವ ಈ ಅಸಂವಿಧಾನಿಕ ಆದೇಶವನ್ನ ಈ ಕೂಡಲೇ ವಾಪಸ್ಸು ಪಡೆಯಬೇಕು ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮಗಳು ಸ್ವತಂತ್ರವಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಲು ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರವನ್ನ ಅಶೋಕ್ ಆಗ್ರಹಿಸಿದ್ದಾರೆ.

