ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಕ್ಷರಶಃ ಬಂಧನದಲ್ಲಿರಿಸಿ, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಸರ್ವಾಧಿಕಾರಿತನ ಮೆರೆದ 70ರ ದಶಕದ ಕಾಂಗ್ರೆಸ್ ಸರ್ಕಾರಕರಾಳ ಇತಿಹಾಸ ಕರ್ನಾಟಕದಲ್ಲಿ ಈಗ ಮರುಕಳಿಸಿದೆ! ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
ದ್ವೇಷ ಭಾಷಣ ಕಾಯ್ದೆಯನ್ನು ಜಾರಿಗೆ ತರುವ ದುಸ್ಸಾಹಸ ನಡೆಸಿರುವ ಬೆನ್ನಲ್ಲೇ ವಿಧಾನಸೌಧದಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ ಹೇರುವ ನಿರ್ಬಂಧ ಹೇರಲು ಮಾಧ್ಯಮ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಸುತ್ತೋಲೆ ಹೊರಡಿಸಿ, ಮಾಧ್ಯಮ ಕ್ಷೇತ್ರದ ಮೇಲೆ ಅಂಕುಶ ಹಾಕಲು ಹೊರಟಿದೆ.
ಇದೊಂದು ಪ್ರಜಾಪ್ರಭುತ್ವ ವ್ಯವಸ್ತೆಯನ್ನು ಅಣಕಿಸುವ ಅವಿವೇಕತನದ ಸರ್ವಾಧಿಕಾರಿ ಧೋರಣೆಯಲ್ಲದೇ ಮತ್ತೇನೂ ಅಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ ಕ್ಷೇತ್ರವೆಂದರೆ ಕಾಂಗ್ರೆಸ್ಸಿಗರಿಗೆ ಈ ಮೊದಲಿನಿಂದಲೂ ಅಪಥ್ಯ. ಸಂದರ್ಭ ಬಂದಾಗಲೆಲ್ಲಾ ಮಾಧ್ಯಮದವರ ಮೇಲೆ ದಬ್ಬಾಳಿಕೆ ನಡೆಸುವ ಸಂಸ್ಕೃತಿ ಕಾಂಗ್ರೆಸ್ಸಿಗರು ರೂಢಸಿಕೊಂಡಿದ್ದಾರೆ.
ಅದರ ಮುಂದುವರೆದ ಭಾಗವಾಗಿ ಭದ್ರತೆಯ ಹೆಸರಿನಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರುವ ಈ ನಿರ್ಧಾರ ಅತ್ಯಂತ ಖಂಡನೀಯ ಹಾಗೂ ನಾಚಿಕೆಗೇಡಿತನದ ಪರಮಾವಧಿಯಾಗಿದೆ.
ಈ ಕೂಡಲೇ ಈ ಸುತ್ತೋಲೆಯನ್ನು ವಾಪಾಸು ಪಡೆದು, ಕಾಂಗ್ರೆಸ್ಸರ್ಕಾರ ಮಾಧ್ಯಮ ಬಂಧುಗಳ ಕ್ಷಮೆ ಯಾಚಿಸಬೇಕು. ಪ್ರಜಾಪ್ರಭುತ್ವ ದೇಗುಲ ವಿಧಾನಸೌಧದಲ್ಲಿ ಪಾಳೇಗಾರಿಕೆ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲು ಹೊರಟಿರುವ ಕಾಂಗ್ರೆಸ್ಸರ್ಕಾರಕ್ಕೆ ಧಿಕ್ಕಾರ! ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

