ಚಂದ್ರವಳ್ಳಿ ನ್ಯೂಸ್, ತುಮಕೂರು:
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ.
ಸಚಿವ ಮಹದೇವಪ್ಪ ಅವರು ಈಗಾಗಲೇ ಈ ವಿಷಯ ಕುರಿತು ಮಾತನಾಡಿದ್ದು, ಇತರೆ ರಾಜ್ಯಗಳ ಉದಾಹರಣೆಗಳನ್ನು ನೀಡಿ ದಲಿತ ಸಿಎಂ ಸಾಧ್ಯತೆಯನ್ನು ಸಮರ್ಥಿಸಿದ್ದಾರೆ ಎಂದು ರಾಜಣ್ಣ ನೆನಪಿಸಿಕೊಂಡರು.
ದಲಿತರು, ಅಲ್ಪಸಂಖ್ಯಾತರು, ವಾಲ್ಮೀಕಿ ಸಮುದಾಯದವರು ಅಥವಾ ಬಲಿಜ ಸಮುದಾಯದವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಲ್ಲವೇ ಎಂದು ರಾಜಣ್ಣ ತೀಕ್ಷ್ಣವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಇತಿಹಾಸ ವಿವರಿಸಿದ ಅವರು, ಕಾಂಗ್ರೆಸ್ ಯಾವಾಗಲೂ ಎಲ್ಲ ಸಮುದಾಯದವರಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದೆ. 1972ರಲ್ಲಿ ದೇವರಾಜ ಅರಸು ಅವರು ಶಾಸಕರಾಗಿರದಿದ್ದರೂ, ಪಕ್ಷದ ಹೆಚ್ಚಿನ ಶಾಸಕರ ಒಲವು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು.
ದೇವರಾಜ ಅರಸು ಅವರು ತಮ್ಮದೇ ಜಾತಿಯ ಇನ್ನೊಬ್ಬ ಶಾಸಕರನ್ನು ಹೊಂದಿರಲಿಲ್ಲ ಎಂಬುದು ಗಮನಾರ್ಹ. ಇದೇ ರೀತಿ ವೀರಪ್ಪ ಮೊಯ್ಲಿ ಮತ್ತು ಧರಂಸಿಂಗ್ ಅವರ ವಿಷಯದಲ್ಲಿಯೂ ಅವರ ಸಮುದಾಯದಿಂದ ಇನ್ನೊಬ್ಬ ಪ್ರಮುಖ ನಾಯಕರು ಇರಲಿಲ್ಲ. ಆದರೂ ಪಕ್ಷ ಅವರಿಗೆ ಅವಕಾಶ ನೀಡಿತು. ಕಾಂಗ್ರೆಸ್ ಪಕ್ಷ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ ಎಂಬುದನ್ನು ರಾಜಣ್ಣ ಒಪ್ಪಿಕೊಂಡರು.
ಆದರೆ ದಲಿತರು, ಅಲ್ಪಸಂಖ್ಯಾತರು ಮತ್ತು ಬಣಜಿಗರಂತಹ ಸಮುದಾಯಗಳಿಗೆ ಈ ಅವಕಾಶ ಸಿಕ್ಕಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಹೆಚ್ಚು ಜನಸಂಖ್ಯೆ ಇರುವ ವಾಲ್ಮೀಕಿ ಸಮುದಾಯದವರಿಗೆ ಸಹ ಹೆಚ್ಚಿನ ಅವಕಾಶಗಳು ದೊರೆತಿಲ್ಲ ಎಂದು ಕೆ.ಎನ್ ರಾಜಣ್ಣ ಹೇಳಿದರು.

