ಸಮಾಜದ ಸರ್ವತೋಮುಖ ಏಳಿಗೆಗೆ “ಸಾಮಾಜಿಕ ನ್ಯಾಯ”ವೇ ಬುನಾದಿ-ಡಾ.ಕರಿಯಪ್ಪ ಮಾಳಿಗೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಸಾಮಾಜಿಕ ನ್ಯಾಯವು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದ್ದು
, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಮಾಜಿಕ ನ್ಯಾಯ ಬೇಕು ಎಂದು  ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಮೇರಾ ಯುವ ಭಾರತ್ ಹಾಗೂ ಸರ್ಕಾರಿ ಕಲಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2 ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯದ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

- Advertisement - 

ಸಮಾಜದಲ್ಲಿ ಬೇರೂರಿರುವ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದು ಸಾಮಾಜಿಕ ನ್ಯಾಯ. ಸಮಾಜದಲ್ಲಿ ಶಾಂತಿ, ಸಾಮಾರಸ್ಯ, ಸಮಾನತೆ ತರುವ ನಿಟ್ಟಿನಲ್ಲಿ ಜಾತಿ, ಮತ, ಧರ್ಮ, ಲಿಂಗ ಮೊದಲಾದ ವಲಯಗಳಲ್ಲಿನ ಅಸಮಾನತೆಗಳ ಹೋಗಲಾಡಿಸಿ, ಸರ್ವರು ಬದುಕಲು, ಜೀವಿಸಲು ಸಮಾನತೆಯ ತತ್ವವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಮಾಜವನ್ನು ಕಟ್ಟಬೇಕಿದ್ದು, ಇದರಲ್ಲಿ ಯುವಕರ ಪಾತ್ರ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಮಾಜಿಕ ನ್ಯಾಯ ಬೇಕು. ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ದಲಿತರು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಒದಗಿಸಬೇಕು.

- Advertisement - 

ಯಾರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೋ ಅಂತಹವರಿಗೆ ನ್ಯಾಯ ಒದಗಿಸುವುದೇ ನಿಜವಾದ ಸಾಮಾಜಿಕ ನ್ಯಾಯ. ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಕ್ಕಾಗ ಮಾತ್ರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಲು ಸಾಧ್ಯ ಎಂದರು. ವಕೀಲ ಎ.ಇಸ್ಮಾಯಿಲ್ ಜಬೀವುಲ್ಲಾ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಕಾರ್ಯಕ್ರಮಾಧಿಕಾರಿ ಬಿ.ಕೆ.ಬಸವರಾಜ, ಮೇರಾ ಯುವ ಭಾರತ್  ಸಹಾಯಕ ಜಿ.ಪಿ.ಭರತ್ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

 

Share This Article
error: Content is protected !!
";