ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ಯಾರಂಟಿಗಳ ಪ್ರಚಾರಕ್ಕೆ, ಯಾರೂ ಓದದ ಪತ್ರಿಕೆಗಳಿಗೆ ಕೋಟಿ ಕೋಟಿ ಸುರಿಯುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಬಡವರ ಪ್ರಾಣ ಉಳಿಸುವ ಆರೋಗ್ಯ ಸೇವೆಗೆ ನೀಡಲು ಮಾತ್ರ ಹಣ ಇರುವುದಿಲ್ಲ! ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಆಡಳಿತ ಹೇಗೆ ನಡೆಸಬಾರದು ಎನ್ನುವುದಕ್ಕೆ ಈ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮೇಲ್ಪಂಕ್ತಿ ಹಾಕಿಕೊಡುತ್ತಿದೆ. ‘ಶೂನ್ಯ ಅಭಿವೃದ್ಧಿ‘ಯ ಈ ಕಾಂಗ್ರೆಸ್ ಸರ್ಕಾರ, ರಾಜ್ಯದ ಆರೋಗ್ಯ ಸೇವಾ ವಲಯವನ್ನು ಸಂಪೂರ್ಣವಾಗಿ ಹಾಳು ಮಾಡಿದೆ ಎಂದು ಅವರು ದೂರಿದ್ದಾರೆ.
ಉತ್ತಮವಾಗಿ ನಡೆಯುತ್ತಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಪ್ರಯತ್ನಿಸಿತು. ಸರ್ಕಾರದ ಕೆಟ್ಟ ನಿರ್ವಹಣೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಗಂಭೀರ ಕೊರತೆ ಎದುರಾಗಿದೆ. ಜನರಿಗೆ ಇಷ್ಟು ಸಂಕಷ್ಟ ಸಾಲದು ಎಂಬಂತೆ, ಈಗ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದ ಉಚಿತ ಸ್ಕ್ಯಾನಿಂಗ್ ಸೇವೆ ಕೂಡ ಈ ಕೆಟ್ಟ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿರುವುದು ಅತ್ಯಂತ ದುರದೃಷ್ಟಕರ. 140 ಕೋಟಿ ರೂ. ಬಾಕಿ ಹಣವನ್ನು ಪಾವತಿಸದೆ, ಬಡಜನರ ಆರೋಗ್ಯದ ಜೊತೆ ಈ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ವಿಜಯೇಂದ್ರ ಟೀಕಿಸಿದರು.
ಜಿಲ್ಲಾಸ್ಪತ್ರೆಗಳಿಗೆ ಬರುವ ಬಡವರು ಸ್ಕ್ಯಾನಿಂಗ್ಗಾಗಿ ಖಾಸಗಿ ಕೇಂದ್ರಗಳಿಗೆ ಅಲೆದಾಡುವಂತಾಗಿದ್ದು, ಕಾಂಗ್ರೆಸ್ ಸರ್ಕಾರದ ಈ ಆಡಳಿತಾತ್ಮಕ ವೈಫಲ್ಯಕ್ಕೆ ಜನಸಾಮಾನ್ಯರು ಬೆಲೆ ತೆರುವಂತಾಗಿದೆ. ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಂಡು ಜನರ ನೆರವಿಗೆ ಧಾವಿಸಬೇಕಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜಕೀಯ ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ.
ತನ್ನ ಅಮಾನವೀಯ ಧೋರಣೆಗಳನ್ನು ಕೈಬಿಟ್ಟು, ಜನರಿಗೆ ತೊಂದರೆ ಆಗದಂತೆ ರಾಜ್ಯ ಸರ್ಕಾರ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು. ಕೂಡಲೇ ಅಗತ್ಯ ನಿರ್ಧಾರಗಳನ್ನು ತೆಗೆದುಕೊಂಡು, ಸ್ಥಗಿತಗೊಂಡಿರುವ ಸಿಟಿ ಸ್ಕ್ಯಾನಿಂಗ್ ಹಾಗೂ ಎಂಐರ್ಐ ಸೇವೆಗಳು ಬಡಜನರಿಗೆ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

